ಪುತ್ತೂರು ದಾರುಲ್ ಹಸನಿಯಾ ಅಕಾಡೆಮಿಯಲ್ಲಿ ಹಿಫ್ಲುಲ್ ಖುರ್‌ಆನ್ ಹಾಗೂ ಎಸ್.ಎನ್.ಇ.ಸಿ ತರಗತಿಗಳ ಉದ್ಘಾಟನೆ
ಪುತ್ತೂರು: ಇಲ್ಲಿನ ಎಜು ಪಾರ್ಕ್ ದಾರುಲ್ ಹಸನಿಯಾ ಅಕಾಡೆಮಿಯಲ್ಲಿ 2026-27ನೇ ಶೈಕ್ಷಣಿಕ ವರ್ಷದ ಹಿಫ್ಲುಲ್ ಖುರ್‌ಆನ್ ಹಾಗೂ ‘ಸಮಸ್ತ’ ಅಧೀನದ ಎಸ್.ಎನ್.ಇ.ಸಿ (ಸಮನ್ವಯ ಶಿಕ್ಷಣ) ತರಗತಿಗಳ ಉದ್ಘಾಟನೆ ‘ಮುಖದ್ದಿಮ’ ಕಾರ್ಯಕ್ರಮ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಪ್ರಾರ್ಥನೆ ನಡೆಸಿ ಮಾತನಾಡಿದ ಸಯ್ಯಿದ್ ಅಲಿ ತಂಙಳ್ ಕುಂಬೋಳ್ ಅವರು ವಿದ್ಯಾರ್ಥಿಗಳು ಜ್ಞಾನ ಸಂಪಾದನೆಯೊಂದಿಗೆ ಉತ್ತಮ ವ್ಯಕ್ತಿತ್ವ ಹಾಗೂ ಉನ್ನತ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ, ಈ ನಿಟ್ಟಿನಲ್ಲಿ ‘ಸಮಸ್ತ’ದ ಅಧೀನದಲ್ಲಿ ಕಾರ್ಯನಿರ್ವಹಿಸುವ ಎಸ್.ಎನ್.ಇ.ಸಿ.ಯ ಸಮನ್ವಯ ಶಿಕ್ಷಣ ಪದ್ಧತಿಯು ಕಾಲೋಚಿತ ಮತ್ತು ಪರಿಣಾಮಕಾರಿಯಾಗಿದ್ದು, ದಾರುಲ್ ಹಸನಿಯಾ ಅಕಾಡೆಮಿಯಲ್ಲಿ ಅದು ಯಶಸ್ವಿಯಾಗಿ ಮುಂದುವರಿಯಲಿ ಎಂದು ಹಾರೈಸಿದರು.

ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದ ‘ಸಮಸ್ತ’ ಕೇಂದ್ರ ಮುಶಾವರ ಸದಸ್ಯ ಅಬ್ದುಲ್ಲಾ ಫೈಝಿ ಕೊಡಗು ಅವರು ಇಸ್ಲಾಂ ಜ್ಞಾನಾರ್ಜನೆಗೆ ಅತ್ಯುನ್ನತ ಸ್ಥಾನ ನೀಡಿದ್ದು, ಧಾರ್ಮಿಕ ಶಿಕ್ಷಣವು ಮನುಷ್ಯನ ಬದುಕಿಗೆ ಬೆಳಕಿನ ದಾರಿಯಾಗಿದೆ, ಶಿಕ್ಷಣದ ಮೂಲಕ ಉತ್ತಮ ಸಮಾಜ ನಿರ್ಮಾಣ ಸಾಧ್ಯವೆಂದು ಹೇಳಿದರು. ‘ಸಮಸ್ತ’ ಕೇಂದ್ರ ಮುಶಾವರ ಸದಸ್ಯ ಉಸ್ಮಾನುಲ್ ಫೈಝಿ ತೋಡಾರ್ ಮಾತನಾಡಿ, ದಾರುಲ್ ಹಸನಿಯಾ ಅಕಾಡೆಮಿ ಅನುಸರಿಸುತ್ತಿರುವ ಸಮನ್ವಯ ಶಿಕ್ಷಣ ವ್ಯವಸ್ಥೆಯು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಪೂರಕವಾಗಿದ್ದು, ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಪೋಷಕರು ಸಂಸ್ಥೆಯೊಂದಿಗೆ ನಿಸ್ವಾರ್ಥ ಸಹಕಾರ ನೀಡಬೇಕು ಎಂದು ಹೇಳಿದರು. ವಾಗ್ಮಿ ಪಾಣತ್ತೂರು ಅಶ್ರಫಿ ಪರ್ಲಡ್ಕ ಮಾತನಾಡಿ ಮೌಲ್ಯಾಧಾರಿತ ಶಿಕ್ಷಣವೇ ಉತ್ತಮ ಸಮಾಜ ನಿರ್ಮಾಣದ ಅಡಿಪಾಯವಾಗಿದ್ದು, ವಿದ್ಯಾರ್ಥಿಗಳು ಜ್ಞಾನ ಮತ್ತು ಸಂಸ್ಕಾರ ಎರಡನ್ನೂ ಸಮಾನವಾಗಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಸಯ್ಯಿದ್ ಯಹ್ಯ ತಂಙಳ್ ಪೋಳ್ಯ ಮಾತನಾಡಿ, ಸಂಸ್ಥೆಯ ಶೈಕ್ಷಣಿಕ ಹಾಗೂ ಆಧ್ಯಾತ್ಮಿಕ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕೆಂದು ಹೇಳಿ ವಿಶೇಷ ಪ್ರಾರ್ಥನೆ ನಡೆಸಿದರು. ಸಯ್ಯಿದ್ ಪೂಕುಂಞಿ ತಂಙಳ್ ಉದ್ಯಾವರ ಮಾತನಾಡಿ, ದಾರುಲ್ ಹಸನಿಯಾ ಅಕಾಡೆಮಿ ನೀಡುತ್ತಿರುವ ಶೈಕ್ಷಣಿಕ ಸೇವೆಯನ್ನು ಶ್ಲಾಘಿಸಿ, ಸಂಸ್ಥೆಯ ಮುಂದಿನ ಪ್ರಗತಿಗೆ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಸನ್ ಹಾಜಿ ಸಿಟಿ ಬಝಾರ್ ಅವರು ಸಂಸ್ಥೆಯ ಶೈಕ್ಷಣಿಕ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಅಕ್ರಮ್ ಅಲಿ ತಂಙಳ್ ಕರಾವಳಿ, ಸಿರಾಜುದ್ದೀನ್ ಫೈಝಿ ಬಪ್ಪಳಿಗೆ, ರಿಯಾಝ್ ಇಂಜಿನಿಯರ್ ಪರ್ಲಡ್ಕ ಮೊದಲಾದವರು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಅಬ್ದುಲ್ ಹಮೀದ್ ಬಾಖವಿ ಬೈರಿಕಟ್ಟೆ, ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಗಾಳಿಮುಖ ಮುದರ್ರಿಸ್ ಆದಂ ದಾರಿಮಿ, ಅಶ್ರಫ್ ರಹ್ಮಾನಿ ಸಂಟ್ಯಾರ್, ಇರ್ಶಾದ್ ಫೈಝಿ ಮುಕ್ವೆ, ಅಬ್ದುಲ್ ಬಾಸಿತ್ ಹುದವಿ ಕೂರ್ನಡ್ಕ, ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಅಬ್ದುಲ್ ಅಝೀಝ್ ದಾರಿಮಿ ಕೊಡಾಜೆ, ಅಬ್ಬಾಸ್ ಮದನಿ ಪುತ್ತೂರು, ಅಬ್ಬಾಸ್ ದಾರಿಮಿ ಓಲೆಮುಂಡೋವು, ಶರೀಫ್ ಹಾಜಿ ಕೊಡಾಜೆ, ಅಬ್ದುಲ್ ರಹಿಮಾನ್ ಹಾಜಿ ಆರ್.ಟಿ.ಒ, ಉಮರ್ ಹಾಜಿ ಸಂಪ್ಯ, ಅಶ್ರಫ್ ಹಾಜಿ ಗೋಳಿಕಟ್ಟೆ, ಅಬ್ದುಲ್ ಹಮೀದ್ ಡಿ.ಕೆ ಕೆಮ್ಮಾಯಿ, ಅಬ್ದುಲ್ ರಶೀದ್ ಹಾಜಿ ನೈತಾಡಿ, ದಾರುಲ್ ಹಸನಿಯಾ ಕತಾರ್ ಸಮಿತಿಯ ಅಧ್ಯಕ್ಷ ಅಬೂಬಕ್ಕರ್ ಹಾಜಿ ಮಿತ್ತನಡ್ಕ, ದುಬೈ ಸಮಿತಿಯ ಕಾರ್ಯದರ್ಶಿ ಆಶಿಕ್ ಜುನೈದ್, ಹುಸೈನ್ ಹಾಜಿ ಕೋಡಿಂಬಾಡಿ, ಮನೀರ್ ಕಬಕ, ಉಸ್ಮಾನ್ ಕಕ್ಕಿಂಜೆ, ಆರ್.ಟಿ ಅಬ್ದುಲ್ ರಹಿಮಾನ್ ಹಾಜಿ ಪಡೀಲ್, ಇಸಾಕ್ ಹಾಜಿ ಪಡೀಲ್, ಜಮಾಲ್ ಹಾಜಿ ಮುಕ್ವೆ, ಅಶ್ರಫ್ ಮುಕ್ವೆ, ಹಾಫಿಝ್ ಅಯಾನ್ ಪರ್ಲಡ್ಕ, ಸಿ.ಕೆ.ದಾರಿಮಿ ಕುಂಬ್ರ, ಸುಲೈಮಾನ್ ಮುಸ್ಲಿಯಾರ್ ಕಲ್ಲೇಗ, ಅಬ್ದುಲ್ಲಾ ಹಾಜಿ ಪುರುಷರಕಟ್ಟೆ, ಅಬ್ದುಲ್ ಅಝೀಝ್ ಹಾಜಿ ಮೊಟ್ಟೆತ್ತಡ್ಕ ಮೊದಲಾದ ಹಲವಾರು ಗಣ್ಯರು ಉಪಸ್ಥಿತರಿದ್ದರು. ಕೆ.ಎಂ.ಎ ಕೊಡುಂಗಾಯಿ ಫಾಝಿಲ್ ಹನೀಫಿ ಸ್ವಾಗತಿಸಿದರು. ಅನ್ವರ್ ಸ್ವಾದಿಕ್ ಮುಸ್ಲಿಯಾರ್ ಮೊಟ್ಟೆತ್ತಡ್ಕ ವಿವಿಧ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ಕರೀಂ ದಾರಿಮಿ ವಂದಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು ಮತ್ತು ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.




