ಕರಾವಳಿಕ್ರೈಂ

ಮಂಗಳೂರು: ಮಾದಕ ವಸ್ತು ಮಾರಾಟ, ಇಬ್ಬರು ಆರೋಪಿಗಳ ಬಂಧನ

ಮಂಗಳೂರು: ನಗರದಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ನಿಷೇಧಿತ ಮಾದಕವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಶುಕ್ರವಾರ ಪ್ರತ್ಯೇಕ ಎರಡು ಕಡೆ ದಾಳಿ ನಡೆಸಿ 16.40 ಲಕ್ಷ ರೂ. ಮೌಲ್ಯದ 164 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ಪತ್ತೆ ಹಚ್ಚಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.



ಬಂಧಿತರನ್ನು ನಗರದ ಹೊಮ್ಮೆಬಜಾರ್ ನಿವಾಸಿ ಪ್ರಣಾಮ್ ಕೋಟ್ಯಾನ್ (30) ಮತ್ತು ಮೂಲತಃ ವಳಚ್ಚಿಲ್ ಪದವು ನಿವಾಸಿ, ಪ್ರಸಕ್ತ ಪದವಿನಂಗಡಿಯ ಗುರುನಗರದಲ್ಲಿ ವಾಸವಾಗಿದ್ದ ಧನರಾಜ್ ಪೂಜಾರಿ (33) ಎಂದು ಗುರುತಿಸಲಾಗಿದೆ.

 



ಬೆಂಗಳೂರಿನಿಂದ ಮಂಗಳೂರಿಗೆ ಎಂಡಿಎಂಎ ಮಾದಕ ವಸ್ತುವನ್ನು ತಂದು ಹೊಮ್ಮೆ ಬಜಾರ್ ಪರಿಸರದಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿ ಪ್ರಣಾಮ್ ಕೋಟ್ಯಾನ್‌ನನ್ನು ಬಂಧಿಸಿದ್ದಾರೆ.
ಈತನಿಂದ 10,40,000 ರೂ. ಮೌಲ್ಯದ 104 ಗ್ರಾಂ
ಎಂಡಿಎಂಎ ಹಾಗೂ ಮೊಬೈಲ್ ಫೋನ್, ಜಿಪ್ ಲಾಕ್ ಕವರ್, ಡಿಜಿಟಲ್ ತೂಕಮಾಪನವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಆರೋಪಿಯ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ 2016ರಲ್ಲಿ ಹಲ್ಲೆ ಹಾಗೂ ಬೆದರಿಕೆ ಪ್ರಕರಣ, 2026ರಲ್ಲಿ ಮಾದಕವಸ್ತು ಸೇವನೆ ಪ್ರಕರಣ, 2022ರಲ್ಲಿ ಅಬಕಾರಿ ಇಲಾಖೆಯಲ್ಲಿ ಗಾಂಜಾ ಸಂಬಂಧಿತ ಪ್ರಕರಣ ಹಾಗೂ 2022ರಲ್ಲಿ ಬಂದರ್ ಠಾಣೆಯಲ್ಲಿ ಗಾಂಜಾ ಮಾರಾಟ ಪ್ರಕರಣ ದಾಖಲಾಗಿವೆ.



ನಗರದ ಪದವಿನಂಗಡಿ ಪರಿಸರದಲ್ಲಿ ಎಂಡಿ ಎಂಎ ಮಾದಕ ವಸ್ತುವನ್ನು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿ ಧನರಾಜ್ ಪೂಜಾರಿಯನ್ನು ಬಂಧಿಸಿದ್ದಾರೆ. ಈತನಿಂದ 6 ಲಕ್ಷ ರೂ. ಮೌಲ್ಯದ 60 ಗ್ರಾಂ ಎಂಡಿ ಎಂವಿ ಹಾಗೂ ಜಿಪ್-ಲಾಕ್ ಕವ‌ರ್ ಗಳು, ಮೊಬೈಲ್ ಫೋನ್ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈತನ ಮೇಲೆ ಮಂಗಳೂರು ದಕ್ಷಿಣ, ಉತ್ತರ, ಸುರತ್ಕಲ್, ಬರ್ಕೆ, ಕಾವೂರು, ಕಂಕನಾಡಿ ನಗರ, ಬಂಟ್ವಾಳ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ಹಲ್ಲೆ, ಬೆದರಿಕೆ ಸಹಿತ 12 ಪ್ರಕರಣಗಳು ದಾಖಲಾಗಿದೆ. 2016ರಲ್ಲಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಗಂಭೀರ ಹಲ್ಲೆ ಪ್ರಕರಣದಲ್ಲಿ ಆರೋಪಿಗೆ 3 ವರ್ಷಗಳ ಶಿಕ್ಷೆಯೂ ವಿಧಿಸಲಾಗಿತ್ತು.

Leave a Reply

Your email address will not be published. Required fields are marked *

error: Content is protected !!