ಮಂಗಳೂರು: ರಾತ್ರಿ ಬೀಟ್ ಪೊಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆ- ಇಬ್ಬರು ಆರೋಪಿಗಳು ಅರೆಸ್ಟ್
ಮಂಗಳೂರು: ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಬೀಟ್ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿ ನಂತರ ಕೇರಳಕ್ಕೆ ಪರಾರಿಯಾಗಿದ್ದ ಇಬ್ಬರು ಯುವಕರನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಬೆಳ್ತಂಗಡಿ ತಾಲೂಕು ಹತ್ಯಡ್ಕ ಗ್ರಾಮದ ಸಚಿನ್ ಕೆಆರ್ (24) ಮತ್ತು ಪುತ್ತೂರು ತಾಲೂಕು ನೆಲ್ಯಾಡಿಯ ಚಂದನ್ (24) ಎಂದು ಗುರುತಿಸಲಾಗಿದೆ.
ಮೇ 24 ರಂದು ಬೆಳಗಿನ ಜಾವ 2.10 ರ ಸುಮಾರಿಗೆ ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಕೋಡಿಕಲ್ನ ನಾರಾಯಣಗುರು ಸಮುದಾಯ ಭವನದ ರಸ್ತೆಯ ಬಳಿ ಈ ಘಟನೆ ನಡೆದಿದೆ. ಕೆಂಪು ಎಲೆಕ್ಟ್ರಿಕ್ ಸ್ಕೂಟರ್ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಯುವಕರಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಏಕಾಏಕಿ ಸಿಮೆಂಟ್ ಶೀಟ್ ನ ತುಂಡಿನಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಯ ತಲೆಗೆ ಹೊಡೆದು ಹಲ್ಲೆ ನಡೆಸಿದ್ದ ಪರಿಣಾಮವಾಗಿ ಪೊಲೀಸ್ ಸಿಬ್ಬಂದಿಯ ತಲೆಗೆ ಗಾಯಗಳಾಗಿವೆ.
ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆ ಯತ್ನ ನಡೆಸಿರುವ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 57/2026 ರಲ್ಲಿ ಬಿಎನ್ಎಸ್ನ ಸೆಕ್ಷನ್ 121(1), 109, 132 ಮತ್ತು 3(5) ರ ಅಡಿಯಲ್ಲಿ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಮತ್ತು ಕೊಲೆಗೆ ಯತ್ನಿಸಿದ್ದಕ್ಕಾಗಿ ಪ್ರಕರಣ ದಾಖಲಾಗಿದೆ.
ತನಿಖೆಯ ಸಮಯದಲ್ಲಿ, ಸಂಗ್ರಹಿಸಿದ ಪುರಾವೆಗಳು ಮತ್ತು ಪಡೆದ ವಿಶ್ವಾಸಾರ್ಹ ಮಾಹಿತಿಯ ಆಧಾರದ ಮೇಲೆ, ಸಿಸಿಬಿ ಪೊಲೀಸರು ಮೇ 26 ರಂದು ಕೇರಳದ ಕಾಞಂಗಾಡ್ ಪ್ರದೇಶದಿಂದ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದರು. ನಂತರ ಅವರನ್ನು ಮುಂದಿನ ಕ್ರಮ ಮತ್ತು ವಿಚಾರಣೆಗಾಗಿ ಉರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಯಿತು. ಅಪರಾಧಕ್ಕೆ ಬಳಸಲಾದ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.
ಆರೋಪಿಗಳು ಮಂಗಳೂರಿನ ಅಶೋಕನಗರದ ಫಲ್ಗುಣಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅವರಲ್ಲಿ ಸಚಿನ್ ಕೆ.ಆರ್. ಕುಂಟಿಕಾನ್ನಲ್ಲಿರುವ ಸಿಹಿತಿಂಡಿಗಳ ಪ್ಯಾಕ್ಟರಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಮತ್ತೊಬ್ಬ ಆರೋಪಿ ಚಂದನ್ ಕೂಳೂರಿನ ಅದ್ವೈತ್ ಕಿಯಾ ಶೋ ರೂಮ್ನಲ್ಲಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದನು.
ರಾತ್ರಿ 2 ಗಂಟೆ ಸುಮಾರಿಗೆ ನಗರದಲ್ಲಿ ಸುತ್ತಾಡುತ್ತಿದ್ದಾಗ ಬೀಟ್ ಪೊಲೀಸ್ ಸಿಬ್ಬಂದಿ ತಡೆದು ಪ್ರಶ್ನಿಸಿದಾಗ ಕೋಪಗೊಂಡ ಆರೋಪಿಗಳು ಪೊಲೀಸರ ಮೇಲೆ ಸಿಮೆಂಟ್ ಶೀಟ್ನಿಂದ ಹಲ್ಲೆ ನಡೆಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.






