ಕರಾವಳಿಕ್ರೈಂ

ಬಂಟ್ವಾಳ: ಬೃಹತ್ ಮಾದಕ ವಸ್ತು ಬೇಟೆ; 42 ಲಕ್ಷ ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಸಹೋದರರ ಬಂಧನ


ಬಂಟ್ವಾಳ: ಬೆಂಗಳೂರಿನಿಂದ ಅಕ್ರಮವಾಗಿ ನಿಷೇಧಿತ ಮಾದಕ ವಸ್ತುವನ್ನು ಸಾಗಿಸುತ್ತಿದ್ದ ಜಾಲವನ್ನು ಭೇದಿಸಿರುವ ಬಂಟ್ವಾಳ ಗ್ರಾಮಾಂತರ ಪೊಲೀಸರು, ಸುಮಾರು 42.30 ಲಕ್ಷ ರೂಪಾಯಿ ಮೌಲ್ಯದ ಎಂಡಿಎಂಎ (MDMA) ಸಹಿತ ಇಬ್ಬರು ಆರೋಪಿಗಳನ್ನು ಶನಿವಾರ ಸಂಜೆ ಬಂಧಿಸಿದ್ದಾರೆ.


ಬೊಳಂತೂರು ನಿವಾಸಿಗಳಾದ ಮೊಹಮ್ಮದ್‌ ನಿಜಾಮುದ್ದೀನ್‌ (30) ಹಾಗೂ ಆತನ ಸಹೋದರ ಮೊಹಮದ್‌ ಶಾಹೀಂ (19) ಬಂಧಿತ ಆರೋಪಿಗಳು.
ಬಂಟ್ವಾಳ ಮಂಚಿ ಗ್ರಾಮದ ಪಂಜಾಲ ಕ್ರಾಸ್‌ ಮೂಲಕ ಮಾದಕ ವಸ್ತು ಸಾಗಾಟವಾಗುತ್ತಿದೆ ಎಂಬ ಖಚಿತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ, ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಉಪ ನಿರೀಕ್ಷಕ (ಕಾ&ಸು) ಮಂಜುನಾಥ ಟಿ. ಹಾಗೂ ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆ ನಡೆಸಿದರು. ಈ ವೇಳೆ ಅತಿ ವೇಗವಾಗಿ ಬಂದ ಬೊಲೆರೋ ವಾಹನವನ್ನು ತಡೆದು ತಪಾಸಣೆ ನಡೆಸಿದಾಗ ಅಕ್ರಮ ಮಾದಕ ವಸ್ತು ಪತ್ತೆಯಾಗಿದೆ.

 


ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿದಾಗ, ಅವರು ಈ ಮಾದಕ ವಸ್ತುವನ್ನು ಬೆಂಗಳೂರಿನಲ್ಲಿ ನೈಜೀರಿಯಾ ಪ್ರಜೆಯೊಬ್ಬರಿಂದ ಖರೀದಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಇದನ್ನು ಸ್ಥಳೀಯವಾಗಿ ಮಾರಾಟ ಮಾಡುವ ಉದ್ದೇಶದಿಂದ ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ. ಆರೋಪಿಗಳಿಂದ ಒಟ್ಟು 423 ಗ್ರಾಂ ತೂಕದ ಎಂಡಿಎಂಎ ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ ಸುಮಾರು 42,30,000 ರೂಪಾಯಿ ಎಂದು ಅಂದಾಜಿಸಲಾಗಿದೆ. ಇದರೊಂದಿಗೆ ಕೃತ್ಯಕ್ಕೆ ಬಳಸಿದ ಬೊಲೆರೋ ವಾಹನ ಹಾಗೂ 3 ಮೊಬೈಲ್‌ ಫೋನ್‌ಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ವಶಪಡಿಸಿಕೊಳ್ಳಲಾದ ಒಟ್ಟು ಸೊತ್ತುಗಳ ಮೌಲ್ಯ ಸುಮಾರು 46,25,000 ರೂಪಾಯಿಗಳಾಗಿವೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ (NDPS) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *

error: Content is protected !!