ಪುತ್ತೂರು: ಕಾಲೇಜು ವಿದ್ಯಾರ್ಥಿ ಮೇಲೆ ತಂಡದಿಂದ ಹಲ್ಲೆ
ಪುತ್ತೂರು: ವಿದ್ಯಾರ್ಥಿಯೋರ್ವನ ಮೇಲೆ ತಂಡವೊಂದು ಹಲ್ಲೆ ನಡೆಸಿರುವ ಘಟನೆ ಪುತ್ತೂರಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಬುಧವಾರ ಸಂಜೆ ನಡೆದಿದೆ.

ಬೆಳ್ತಂಗಡಿ ನಿವಾಸಿಯಾದ ಆದಿಲ್ ಹುಸೈನ್ (21) ಹಲ್ಲೆಗೊಳಗಾದ ವಿದ್ಯಾರ್ಥಿ. ಈತ ಪುತ್ತೂರಿನ ಖಾಸಗಿ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಬುಧವಾರ ಸಂಜೆ ತನ್ನ ಸ್ನೇಹಿತರಾದ ಸುಹೇಲ್ ಮತ್ತು ಅಝಾರ್ ಎಂಬವರೊಂದಿಗೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಚಹಾ ಕುಡಿಯುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಬಿ.ಕೆ. ಮೊಯಿನುದ್ದೀನ್, ಮೋಹದ್ ಹಾಗೂ ಇತರ ಐವರು ಏಕಾಏಕಿ ಆದಿಲ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಕೆಲವು ತಿಂಗಳ ಹಿಂದೆ ಆರೋಪಿ ಮೊಯಿನುದ್ದೀನ್ ಮತ್ತು ತಂಡದವರು ಕಾಲೇಜು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುತ್ತಿದ್ದರು. ಆ ಸಮಯದಲ್ಲಿ ಆದಿಲ್ ಹುಸೈನ್ ಮಧ್ಯಪ್ರವೇಶಿಸಿ ಗಲಾಟೆಯನ್ನು ಬಿಡಿಸಿದ್ದರು. ಇದೇ ವಿಚಾರವಾಗಿ ದ್ವೇಷ ಸಾಧಿಸುತ್ತಿದ್ದ ಆರೋಪಿಗಳು, ಸಂಚು ರೂಪಿಸಿ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.
ಹಲ್ಲೆಯನ್ನು ತಡೆಯಲು ಬಂದ ಸಾರ್ವಜನಿಕರಿಗೂ ಹಾಗೂ ಆದಿಲ್ ಸ್ನೇಹಿತರಿಗೂ ಆರೋಪಿಗಳು ಜೀವಬೆದರಿಕೆ ಹಾಕಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಆದಿಲ್ ಹುಸೈನ್ ಸದ್ಯ ಪುತ್ತೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



