ಕಾಲೇಜು ವಿದ್ಯಾರ್ಥಿನಿಯನ್ನು ರಸ್ತೆಯಲ್ಲಿ ಎಳೆದಾಡಿದ ಆಟೊ ಚಾಲಕ
ಥಾಣೆ: ಮಹಾರಾಷ್ಟ್ರದ ಥಾಣೆ ನಗರದಲ್ಲಿ 21 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬರಿಗೆ ಆಟೊ ಚಾಲಕನೊಬ್ಬ ಕಿರುಕುಳ ನೀಡಿದ್ದು, ರಸ್ತೆಯಲ್ಲಿ ಎಳೆದೊಯ್ದಿರುವ ಘಟನೆ ನಡೆದಿದೆ.
ನಗರದಲ್ಲಿ ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚಾಲಕನ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹ ವ್ಯಕ್ತವಾಗಿದೆ.
ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಗೆ ಆಟೊ ಚಾಲಕ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಇದೇ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಚಾಲಕ ಆಕೆಯ ಕೈ ಹಿಡಿದು ಎಳೆದಾಡಿದ್ದಾನೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.
ಸ್ಥಳದಿಂದ ಪಲಾಯನ ಮಾಡಲು ಯತ್ನಿಸಿದ ಆಟೊ ಚಾಲಕನಿಗೆ ವಿದ್ಯಾರ್ಥಿನಿ ತಡೆಯೊಡ್ಡಿದ್ದಾಗ, ಆಕೆಯನ್ನೇ ಆಟೊದೊಂದಿಗೆ ಸುಮಾರು 500 ಮೀಟರ್ ಎಳೆದೊಯ್ದಿದ್ದಾನೆ. ಆಕೆ ನೆಲಕ್ಕೆ ಬಿದ್ದ ಬಳಿಕ ಚಾಲಕ ಪರಾರಿಯಾಗಿದ್ದಾನೆ.
ವಿದ್ಯಾರ್ಥಿನಿ ಹೇಳಿಕೆ ಆಧರಿಸಿ ಐಪಿಸಿ ಸೆಕ್ಷನ್ 354 (ಮಹಿಳೆಯ ಮೇಲೆ ದೌರ್ಜನ್ಯ ಅಥವಾ ಬಲ ಪ್ರಯೋಗ) ಇತರೆ ನಿಬಂಧನೆಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ತಲೆಮರೆಸಿಕೊಂಡಿರುವ ಆಟೊ ಚಾಲಕನಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.