ಸುಳ್ಯ: ಚೂರಿಯಿಂದ ಹಲ್ಲೆ, ಇಬ್ಬರು ಆರೋಪಿಗಳ ಬಂಧನ
ಸುಳ್ಯ: ಶ್ರೀರಾಮ್ ಪೇಟೆಯಲ್ಲಿರುವ ರಾಜೇಶ್ ಬಾರ್ನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಗಳ ಮೇಲೆ ಚೂರಿಯಿಂದ ಹಲ್ಲೆ ನಡೆಸಿದ ಘಟನೆ ಮಾ.14ರಂದು ನಡೆದಿದ್ದು ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ.

ಮಾ.14 ರಂದು ಸಂಜೆ ಶ್ರೀರಾಮ್ ಪೇಟೆಯ ರಾಜೇಶ್ ಬಾರ್ನಲ್ಲಿ ನಿತೇಶ್ ಆರ್.ಕೆ (33) ಮತ್ತು ಅವರ ಸ್ನೇಹಿತ ಹರೀಶ್ ಎಂಬುವವರ ಮೇಲೆ ಇಬ್ಬರು ಯುವಕರು ಚೂರಿಯಿಂದ ಹಲ್ಲೆ ನಡೆಸಿದ್ದಾರೆ. ಈ ದಾಳಿಯಲ್ಲಿ ಹರೀಶ್ ಅವರ ಎಡ ಕುತ್ತಿಗೆಗೆ ಮತ್ತು ಇಬ್ಬರ ಎಡ ಕೈಗಳಿಗೆ ಗಾಯಗಳಾಗಿವೆ.
ಬಾರ್ನಲ್ಲಿದ್ದ ಸಾರ್ವಜನಿಕರು ತಕ್ಷಣ ಹಲ್ಲೆಯನ್ನು ತಡೆದು, ಗಾಯಾಳುಗಳನ್ನು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಜ್ಜಾವರ ಗ್ರಾಮದ ರಾಜೇಶ್ ಬಿ.ಆರ್ (27) ಹಾಗೂ ದಯಾನಂದ್ (30) ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.





