ವಂಚನೆ ಪ್ರಕರಣ: 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಉಳ್ಳಾಲ: ನಗರದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣಗಳಲ್ಲಿ 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಮೂಲದ 41 ವರ್ಷದ ಅಜಯ್ ಪ್ರಸಾದ್ ಜಿ ಬಂಧಿತ ಆರೋಪಿ ಈತನ ವಿರುದ್ಧ 3 ವಂಚನೆ ಪ್ರಕರಣಗಳು ದಾಖಲಾಗಿತ್ತು.

ಅಜಯ್ ಪ್ರಸಾದ್ ಜಿ ನ್ಯಾನೋ ಫರಾಕ್ಸ್ ಇಂಡಿಯಾ ಎಂಬ ಸಂಸ್ಥೆಯ ಫರಾಕ್ಸ್ ರೋಬೋಟ್ ಸಾಫ್ಟ್‌ವೇರ್ ಮೂಲಕ ಕರೆನ್ಸಿ ಟ್ರೇಡಿಂಗ್ ಮತ್ತು ಷೇರು ವ್ಯವಹಾರದಲ್ಲಿ ತಿಂಗಳಿಗೆ 40% ಲಾಭ ಹಾಗೂ 20% ಮರುಪಾವತಿ ನೀಡುವುದಾಗಿ ಭರವಸೆ ನೀಡುತ್ತಾ, ಗ್ರಾಹಕರ ಐಡಿ ಕಾರ್ಡ್ ಮತ್ತು ದಾಖಲೆಗಳನ್ನು ಪಡೆದು ವಿಶ್ವಾಸ ಹುಟ್ಟಿಸಿ, ವಂಚನೆ ನಡೆಸಿರುವ ಆರೋಪವಿದೆ. ವಿವಿಧ ಗ್ರಾಹಕರಿಂದ ಸುಮಾರು 1 ಕೋಟಿ 20 ಲಕ್ಷ ರೂ. ಹಣವನ್ನು ವಂಚಿಸಿಕೊಂಡಿದ್ದರೂ, ಯಾವುದೇ ಲಾಭ ಅಥವಾ ಮರುಪಾವತಿ ನೀಡದೇ ಹಣವನ್ನು ದುರುಪಯೋಗಪಡಿಸಿರುವುದಾಗಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರಕರಣಗಳು 2011ನೇ ಸಾಲಿನಲ್ಲಿ ದಾಖಲಾಗಿದ್ದವು.
ಅಜಯ್ ಪ್ರಸಾದ್ ಜಿಯನ್ನು ಉಳ್ಳಾಲ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಬೆಂಗಳೂರಿನಿಂದ ದಸ್ತಗಿರಿ ಮಾಡಿ ಮಂಗಳೂರು ನಗರದ 7ನೇ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿಯುತ್ತಿದೆ.




