ಕರಾವಳಿ

ವಿಸ್ಡಮ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ವಾರ್ಷಿಕೋತ್ಸವ ಸಂಭ್ರಮ

ಬಂಟ್ವಾಳ: ತಾಲೂಕಿನ ಕಡೇಶಿವಾಲಯ ಗ್ರಾಮದ ವಿಸ್ಡಮ್ ಆಂಗ್ಲ ಮಾಧ್ಯಮ ಶಾಲೆ ಬುಡೋಳಿ-ಗಡಿಯಾರ ಇದರ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ವಾರ್ಷಿಕೋತ್ಸವ  “WEMS SPARK _2K25” ಕಾರ್ಯಕ್ರಮವನ್ನು, ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿರುವ ಅಬ್ದುಲ್ ಜಬ್ಬಾರ್ ಬುಡೋಳಿ (ಅಬುಧಾಬಿ) ರವರ ಅಧ್ಯಕ್ಷತೆಯಲ್ಲಿ ಶಾಲಾ ಆವರಣದಲ್ಲಿ ನಡೆಯಿತು.

ಆರಂಭದಲ್ಲಿ ಅತಿಥಿಗಳನ್ನು ಬ್ಯಾಂಡ್ ಸೆಟ್ ಮೂಲಕ ಬರಮಾಡಿಕೊಳ್ಳಲಾಯಿತು. ಮುಖ್ಯ ಅತಿಥಿಯಾಗಿ, ಡಿ. ವೈ.  ಪಾಟೀಲ್ ಅಂತರ್ ರಾಷ್ಟ್ರೀಯ ವಿಶ್ವ ವಿದ್ಯಾನಿಲಯ ಪುಣೆ (ಮಹಾರಾಷ್ಟ್ರ ) ಇಲ್ಲಿನ ಕುಲಸಚಿವರಾದ ಡಾ. ಬೀರಾನ್ ಮೊಯ್ದಿನ್  ಹಾಗೂ  ಸಮಾರಂಭದ ಉದ್ಘಾಟಕರಾಗಿ ಗ್ಲೋಬಲ್ ಗ್ಯಾನ್ ಅಕಾಡೆಮಿ ಇದರ ವ್ಯವಸ್ಥಾಪಕ ನಿರ್ದೇಶಕಿ ಡಾ. ರುಕ್ಸಾನಾ ಹಸನ್ ಆಗಮಿಸಿದ್ದರು.
 ಈ ಸಂಧರ್ಭದಲ್ಲಿ, ಕಡೇಶಿವಾಲಯ ಗ್ರಾಪಂ ಅಧ್ಯಕ್ಷೆ ಭಾರತಿ, ಉಪಾಧ್ಯಕ್ಷ ಸುರೇಶ್ ಪೂಜಾರಿ ಕನ್ನೋಟ್, ಅಭಿವೃದ್ಧಿ ಅಧಿಕಾರಿ ಸುನಿಲ್ ಕುಮಾರ್, ವಿಸ್ಡಮ್ ಶಾಲಾ ಸಂಚಾಲಕ ಅಬ್ದುಲ್ ಖಾದರ್ ಕುಕ್ಕಾಜೆ, ಮುಖ್ಯ ಶಿಕ್ಷಕಿ ಆಮಿನಾ ಬಾನು, ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷೆ ರಾಜೇಶ್ವರಿ ಹಾಗೂ ಶಾಲಾ ವಿದ್ಯಾರ್ಥಿ ನಾಯಕಿ ಕುಮಾರಿ ಮುರ್ಷಿದಾ ಕೆ. ವೇದಿಕೆಯಲ್ಲಿ  ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ರುಕ್ಸಾನಾ ಹಸನ್ ರವರು ವಿದ್ಯಾರ್ಥಿಗಳಿಗೆ ತಮ್ಮಲ್ಲಿರುವಂತಹ ಪ್ರತಿಭೆಯನ್ನು ಹೊರಹಾಕುವ ಸಂದರ್ಭ ಇದಾಗಿದ್ದು ಮಕ್ಕಳ ಪೋಷಕರಿಗೂ ತಮ್ಮ ಮಕ್ಕಳ ಪ್ರಗತಿಗೆ ಪೂರಕವಾದ ಹಿತವಚನಗಳನ್ನು ನೀಡಿದರು.
ಅತಿಥಿಯಾಗಿದ್ದ ಡಾ. ಬೀರಾನ್ ಮೊಯ್ದಿನ್ ಬಿ.ಯಂ.ರವರು ಮಾತನಾಡಿ, ಈ ವಿದ್ಯಾ ಸಂಸ್ಥೆಯು ನೆಲೆಗೊಂಡಿರುವ ‘ಗಡಿಯಾರ’ ಎಂಬ ಪರಿಸರವು ತನ್ನ ತವರೂರು ಎಂಬುವುದನ್ನು ನೆನಪಿಸಿಕೊಂಡು,  ಈ ಊರಿನ ಬಗೆಗಿನ ಪ್ರೀತಿ ಮತ್ತು ಆತ್ಮೀಯತೆ ಅಷ್ಟೊಂದು ದೂರದಿಂದ ಪ್ರಯಾಣ ಮಾಡಿ  ಈ ಕಾರ್ಯಕ್ರಮದಲ್ಲಿ ಭಾಗವಹಿಸುವಲ್ಲಿ ನನಗೆ ಪ್ರೇರಣೆಯಾಯಿತು ಎಂದರು. ಮಕ್ಕಳನ್ನು ಇತರ ಮಕ್ಕಳೊಂದಿಗೆ ಹೋಲಿಕೆ ಮಾಡಬೇಡಿ ಎಂದು ಕಿವಿಮಾತು ಹೇಳಿದರು.

ಕಡೇಶಿವಾಲಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಮಾತನಾಡಿ, ತಮ್ಮ ಕಡೇಶಿವಾಲಯ ಗ್ರಾಮದ ಏಕೈಕ ಆಂಗ್ಲ ಮಾಧ್ಯಮ ಶಾಲೆಯಾಗಿರುವ ವಿಸ್ಡಮ್ ವಿದ್ಯಾಸಂಸ್ಥೆಯ ಬೆಳವಣಿಗೆ ಹಾಗೂ ಅದಕ್ಕಾಗಿ ಆಡಳಿತ ಮಂಡಳಿಯ ಶ್ರಮದ ಬಗ್ಗೆ ಕೊಂಡಾಡಿದರು ಹಾಗೂ ಸಂಸ್ಥೆಗೆ, ಸ್ಥಳೀಯಾಡಳಿತ ಪಂಚಾಯತ್ ವತಿಯಿಂದ ಸರ್ವ ರೀತಿಯ ಸಹಕಾರವನ್ನು ಒದಗಿಸುವ ಭರವಸೆಯನ್ನು ನೀಡಿದರು.


ವಿದ್ಯಾರ್ಥಿಗಳಿಗೆ ಕೆಲವೊಂದು ಅಗತ್ಯ ಮಾರ್ಗದರ್ಶನಗಳನ್ನು ನೀಡಿದ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುನಿಲ್ ಕುಮಾರ್ ಅವರು ಅಪರಿಮಿತ ಜ್ಞಾನ ಎಂಬ ಅರ್ಥ ಕೊಡುವ ಈ ಶಾಲೆಯ ಹೆಸರನ್ನು ಇನ್ನಷ್ಟು ಎತ್ತರಕ್ಕೆ ತಲುಪಲೆಂದು ಶುಭ ಹಾರೈಸಿದರು. ಅಲ್ಲದೆ ಶೈಕ್ಷಣಿಕ ರಂಗಕ್ಕೆ ನೀಡುವ ಸರಕಾರದ ಯಾವುದೇ ಯೋಜನೆಗಳನ್ನು ಕ್ಷಿಪ್ರವಾಗಿ ಸದುಪಯೋಗವಾಗಿಸಲು ಸಹಕರಿಸುವ ವಾಗ್ದಾನವನ್ನು ಆಡಳಿತ ಮಂಡಳಿಗೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಸ್ಡಮ್ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕರಾದ ಅಬ್ದುಲ್ ಖಾದರ್ ಕುಕ್ಕಾಜೆ ಅವರು ಸಂಸ್ಥೆಯ ಬೆಳವಣಿಗೆಯಲ್ಲಿ ಅನುಭವಿಸಿರುವ ಎಡರು-ತೊಡರುಗಳ ಬಗ್ಗೆ ಹೇಳುತ್ತಾ, ಇವೆಲ್ಲವುಗಳನ್ನು ಅನಿವಾಸಿ ಮಿತ್ರರ ಬಲಿಷ್ಠವಾದ ಆಡಳಿತ ಮಂಡಳಿಯ  ಸಹಕಾರದೊಂದಿಗೆ ಮೆಟ್ಟಿ ನಿಂತು, ಇಂದು ಈ ಮಟ್ಟಕ್ಕೆ ತಲುಪುವಲ್ಲಿ ಸಹಕರಿಸಿದ ವಿದ್ಯಾರ್ಥಿಗಳ ಪೋಷಕರು, ಸ್ಥಳೀಯ ನಾಗರಿಕರು ಮತ್ತು ಸ್ಥಳೀಯಾಡಳಿತದ ಮಹತ್ತರ ಪಾತ್ರವನ್ನು ವಿವರಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟೂ ಯಶಸ್ವೀ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುಂದೆ ಸಾಗುವಲ್ಲಿ ತಾವೆಲ್ಲರೂ ಕೈ ಜೋಡಿಸುವಂತೆ ಭಿನ್ನವಿಸಿದರು.

ಶಾಲಾ ಮುಖ್ಯ ಶಿಕ್ಷಕಿ ಆಮಿನಾ ಬಾನು  2025-26ನೇ  ಶೈಕ್ಷಣಿಕ ವರ್ಷದ ಪ್ರಗತಿ ಮತ್ತು ಸಾಧನೆಗಳ ಬಗ್ಗೆ ವಿಸ್ತಾರವಾದ ವರದಿಯನ್ನು ಮಂಡಿಸಿದರು.
ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಬುಡೋಳಿ (ಅಬುಧಾಬಿ) ಇವರು ತಮ್ಮ ಅಧ್ಯಕ್ಷೀಯ ಮಾತುಗಳನ್ನಾಡಿ, ವಿದ್ಯಾರ್ಥಿಗಳ ಕಲಿಕಾ ವಿಷಯದಲ್ಲಿ ಸಂಸ್ಥೆಯು ಯಾವುದೇ ರಾಜಿಗೆ ಸಿದ್ಧವಿಲ್ಲ ಅವರ ಯಾವುದೇ ಅವಶ್ಯಕತೆಗಳನ್ನು ಪೂರೈಸಲು ಆಡಳಿತ ಮಂಡಳಿ ಬದ್ಧವಾಗಿದೆ ಮತ್ತು ಅದರೊಂದಿಗೆ ಪೋಷಕರ ಹಾಗೂ ಇಲ್ಲಿನ ನಾಗರಿಕರ ಸಹಕಾರ ದೊರೆತಾಗ ನಮಗೆ ಯಶಸ್ಸನ್ನು ಸಾಧಿಸಬಹುದು ಹಾಗೂ ಮುಂದಿನ ದಿನಗಳಲ್ಲಿ ಕೂಡಾ ಉತ್ತಮ  ಸಲಹೆ, ಸಹಕಾರಕ್ಕಾಗಿ ಸಭೆಯನ್ನು ವಿನಂತಿಸಿಕೊಂಡರು.
ಕಾರ್ಯಕ್ರಮವು ವಿದ್ಯಾರ್ಥಿನಿಗಳಾದ  ಝಿಯಾನಾ, ಹಿಬಾ, ಫಿದಾ, ರಿಝಾ, ಧನ್ಯಶ್ರೀ ಮತ್ತು ಆರಿಫಾರವರ ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾಯಿತು. ಬಳಿಕ ಸಹ ಶಿಕ್ಷಕಿ ಅಲಿಮತ್ ಸಅದಿಯಾ ಸ್ವಾಗತಿಸಿದರು.
ಬಳಿಕ ವಿವಿಧ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ವಿಜೇತ ವಿದ್ಯಾರ್ಥಿಗಳ ಹೆಸರುಗಳನ್ನು  ಕ್ರಮವಾಗಿ, ಸಹಶಿಕ್ಷಕಿಯರುಗಳಾದ ಆಬಿದಾ ಬೇಗಂ, ಕುಮಾರಿ ತಸ್ಮಿನಾ ಹಾಗೂ ಸಹ ಶಿಕ್ಷಕರಾದ ಹೈದರ್ ಮತ್ತು ಕ್ರೀಡಾ ಸ್ಪರ್ಧೆಯಲ್ಲಿನ ಬಹುಮಾನ ವಿಜೇತರ ಹೆಸರುಗಳನ್ನು ಸಹ ಶಿಕ್ಷಕ ಫಝಲ್ ವಾಚಿಸಿದರು.


ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಜಾನಪದ,  ದೇಶಭಕ್ತಿ ಹಾಗೂ ಆಧುನಿಕ ನೃತ್ಯಗಳು ನೆರೆದಿದ್ದ ಪೋಷಕರ ಹಾಗೂ ಪ್ರೇಕ್ಷಕರ ಮನಸೂರೆಗೊಂಡವು. ಸಂಸ್ಥೆಯ ಕರಾಟೆ ವಿದ್ಯಾರ್ಥಿಗಳಿಂದ ಕರಾಟೆ ಶಿಕ್ಷಕ  ಅಬ್ದುಲ್ ರಹಮಾನ್ ನಿರ್ದೇಶನದಲ್ಲಿ ಆತ್ಮ ರಕ್ಷಣಾ ಕಲಾ ಮನೋರಂಜನೆಯ  ಪ್ರದರ್ಶನಗಳನ್ನು ನೀಡಲಾಯಿತು.
   ಸಭಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉಸ್ತುವಾರಿಯನ್ನು ಸಹ ಶಿಕ್ಷಕಿಯರುಗಳಾದ ಮುಬೀನಾ ಶುಭಾನ್, ಕುಮಾರಿ ಸಮ್ರೀನಾ, ಆಶಿಕಾ, ಮುಬೀನಾ ಹಾಗೂ ಅಶ್ಫಿಯಾರವರು ನಿರ್ವಹಿಸಿದರು.
ಸಹ ಶಿಕ್ಷಕಿ ಫಾತಿಮತ್ ಸಿನಾನ ಕಾರ್ಯಕ್ರಮ ನಿರೂಪಣೆಗೈದರು ಸಹ ಶಿಕ್ಷಕಿ ಮೀನಾಕ್ಷಿ ವಂದಿಸಿದರು.
ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿ ಇದರ ನಿರ್ದೇಶಕ ಪ್ರಹ್ಲಾದ್ ಶೆಟ್ಟಿ ಮತ್ತು ವಿಸ್ಡಮ್ ಶಾಲಾ ಶಿಕ್ಷಕ-ರಕ್ಷಕ ಸಂಘದ ಮಾಜಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಕಲ್ಲಾಜೆ ಸಹಿತ ಅನೇಕ ಗಣ್ಯರು ಭೇಟಿ  ನೀಡಿ ಶುಭ ಹಾರೈಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ವಿಶೇಷ ಅತಿಥಿ, ಅಭ್ಯಾಗತರಿಗೆ ಸಂಸ್ಥೆಯ ವತಿಯಿಂದ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.

Leave a Reply

Your email address will not be published. Required fields are marked *

error: Content is protected !!