ಕುಂಬ್ರ ಮರ್ಕಝುಲ್ ಹುದಾದಲ್ಲಿ ಝಕರಿಯಾ ಜೋಕಟ್ಟೆಯವರಿಗೆ ಬೃಹತ್ ಅಭಿನಂದನಾ ಸಮಾರಂಭ
ಪುತ್ತೂರು: 2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅನಿವಾಸಿ ಉದ್ಯಮಿ ಝಕರಿಯಾ ಹಾಜಿ ಜೋಕಟ್ಟೆ ಅವರಿಗೆ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ಬೃಹತ್ ಅಭಿನಂದನಾ ಸಮಾರಂಭ ಡಿ.27ರಂದು ನಡೆಯಿತು.
ಅಭಿನಂದನಾ ಸನ್ಮಾನ ಸ್ವೀಕರಿಸಿದ ಝಕರಿಯಾ ಜೋಕಟ್ಟೆ ಮಾತನಾಡಿ ಮನುಷ್ಯ ಭೂಲೋಕಕ್ಕೆ ಬರುವಾಗ ಬರಿಗೈಯಲ್ಲಿ ಬಂದಿದ್ದಾನೆ, ಹೋಗುವಾಗಲೂ ಬರಿಗೈಯಲ್ಲೇ ಹೋಗುತ್ತಾನೆ, ಅದರ ಮಧ್ಯೆ ನಾವು ಮಾಡುವ ಸತ್ಕಾರ್ಯಗಳು ಮಾತ್ರ ಶಾಶ್ವತ, ನಾವು ಮಾಡಿದ ಆಸ್ತಿಯನ್ನು ಅರ್ಹರಿಗೆ ಹಂಚುವುದರಿಂದ ಅದು ಮತ್ತಷ್ಟು ಇಮ್ಮಡಿಗೊಳ್ಳುತ್ತದೆ, ನನಗೆ ದೇವರು ನೀಡಿದ ಸಂಪತ್ತಿನಲ್ಲಿ ಕಿಂಚಿತ್‌ನ್ನು ಬಡವರಿಗೆ ನೀಡುತ್ತಿದ್ದೇನೆ ಎಂದು ಹೇಳಿದರು.

ಯುವಕನಾಗಿದ್ದಾಗ ಕಷ್ಟಪಟ್ಟ ಕಾರಣ ಈ ಮಟ್ಟಕ್ಕೆ ಬೆಳೆದಿದ್ದೇನೆ. ಶುದ್ದ ಹೃದಯ, ಸಾಧಿಸಲೇಬೇಕೆಂಬ ಹಠ, ಪರಿಶ್ರಮ, ವಿಶ್ವಾಸ ಇದ್ದಾಗ ಯಶಸ್ಸು ಕಟ್ಟಿಟ್ಟ ಬುತ್ತಿ. ಇದಕ್ಕೆ ನಾನೇ ಉದಾಹರಣೆ ಎಂದು ಅವರು ಹೇಳಿದರು.
ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಅಧ್ಯಕ್ಷ ಅಬ್ದುರ್ರಹ್ಮಾನ್ ಹಾಜಿ ಅರಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಧ್ಯಕ್ಷ ಡಾ.ಎಂ.ಎಸ್.ಎಂ ಅಬ್ದುಲ್ ರಶೀದ್ ಝೈನಿ ಕಾಮಿಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಅನಿವಾಸಿ ಉದ್ಯಮಿ ಫಾರೂಕ್ ಹಾಜಿ ಕನ್ಯಾನ ಸಭೆ ಉದ್ಘಾಟಿಸಿದರು. ಶರೀಅತ್ ವಿಭಾಗದ ಪ್ರಾಂಶುಪಾಲರಾದ ವಳವೂರು ಮುಹಮ್ಮದ್ ಸಅದಿ ಪ್ರಾರ್ಥನೆ ನೆರವೇರಿಸಿದರು. ಸಭೆಯಲ್ಲಿ ಎಂ.ಎಚ್.ಕೆ ಸೌದಿ ಪ್ರಮುಖರಾದ ಅಂತಾರಾಷ್ಟ್ರೀಯ ಕೌನ್ಸಿಲರ್ ಕಮರುದ್ದೀನ್ ಗೂಡಿನಬಳಿ, ಅನಿವಾಸಿ ಉದ್ಯಮಿಗಳಾದ ಅಬ್ದುರ್ರಹ್ಮಾನ್ ಅರಮೆಕ್ಸ್ ಜುಬೈಲ್, ಅಮ್ಜದ್ ಖಾನ್ ಪೋಳ್ಯ, ಕೆ.ಎಚ್ ರಫೀಕ್ ಸೂರಿಂಜೆ ಜುಬೈಲ್, ಬಶೀರ್ ತಲಪಾಡಿ ರಿಯಾದ್, ಹಸೈನಾರ್ ಅಮಾನಿ ಅಜ್ಜಾವರ ಅಬುದಾಬಿ ಮಾತನಾಡಿದರು.
ಅಥಾವುಲ್ಲಾ ಕಡಬ ಸೌದಿ, ರಝಾಕ್ ಬುಸ್ತಾನಿ ಅಬುದಾಬಿ, ಆಸಿಫ್ ಪರ್ಲಡ್ಕ ದಮ್ಮಾಮ್, ಪೈರೋಜ್ ಪರ್ಲಡ್ಕ ಜುಬೈಲ್, ಖ್ಯಾತ ಮೋಟಿವೇಟರ್ ರಫೀಕ್ ಮಾಸ್ಟರ್, ಶರೀಅತ್ ಉಪ ಪ್ರಾಂಶುಪಾಲ ಜಲೀಲ್ ಸಖಾಫಿ, ಮರ್ಕಝ್ ಆಡಳಿತ ಸಮಿತಿಯ ಕೋಶಾಧಿಕಾರಿ ಯೂಸುಫ್ ಗೌಸಿಯಾ ಸಾಜ, ಲೆಕ್ಕ ಪರಿಶೋದಕರಾದ ಅನ್ವರ್ ಹುಸೇನ್ ಗೂಡಿನಬಳಿ, ಪತ್ರಕರ್ತ ಯೂಸುಫ್ ರೆಂಜಲಾಡಿ, ಕಾರ್ಯದರ್ಶಿ ಯೂಸುಫ್ ಮೈದಾನಿಮೂಲೆ, ಯೂಸುಫ್ ಹಾಜಿ ಕೈಕಾರ, ಆಶಿಕುದ್ದೀನ್ ಅಖ್ತರ್, ಕರೀಂ ಹಾಜಿ ಕಾವೇರಿ, ಪದವಿ ವಿಭಾಗದ ಪ್ರಾಂಶುಪಾಲ ಮುಹಮ್ಮದ್ ಮನ್ಸೂರ್ ಕಡಬ, ಮುಂತಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಿಂದ ಸ್ಮರಣಿಕೆ ಪದವಿಪೂರ್ವ, ಪದವಿ ವಿಭಾಗದ ವಿದ್ಯಾರ್ಥಿನಿಯರ ಪರವಾಗಿ ರಚಿಸಿದ ಸ್ಮರಣಿಕೆಯನ್ನೂ ಇದೇ ವೇಳೆ ನೀಡಲಾಯಿತು.
ಕಣ್ಣೀರು ಹಾಕಿದ ಝಕರಿಯಾ ಜೋಕಟ್ಟೆ: ಪದವಿ ಪೂರ್ವ ವಿಬಾಗದ ವಿದ್ಯಾರ್ಥಿನಿಯರಾದ ಮಿನಾಝ್ ಉಡುಪಿ, ಹಫೀಝ, ಮುಫೀದ, ಸ್ವಪ್ನ, ಝಕಿಯ್ಯರವರು ರಚಿಸಿ ಹಾಡಿದ ಕಷ್ಟ ಕಾಲದ ಅವರ ಜೀವನದ ವಿಚಾರಗಳ ಹಿನ್ನೋಟದ ಹಾಡನ್ನು ಆಲಿಸಿದ ಝಕರಿಯಾ ಜೋಕಟ್ಟೆಯವರು ಕಣ್ಣೀರು ಹಾಕಿದರು. ಹಾಡು ರಚನೆ ಮಾಡಿದ ವಿದ್ಯಾರ್ಥಿನಿಯರನ್ನು ಅವರನ್ನು ಶ್ಲಾಘಿಸಿದರು.
ಡಾ. ನೂರ್ಜಾನ್‌ಗೆ ಸನ್ಮಾನ: ಬೆಳಗಾವಿಯ ವಿಶ್ವೇಶ್ವರಯ್ಯ ಯೂನಿವರ್ಸಿಟಿಯಿಂದ ಭೌತಶಾಸ್ತ್ರ ವಿಭಾಗದಲ್ಲಿ ಪಿ.ಎಚ್.ಡಿ ಡಾಕ್ಟರೇಟ್ ಪದವಿ ಪಡೆದ ಮರ್ಕಝ್ ಸಂಸ್ಥೆಯ ವಿಜ್ಞಾನ ಉಪನ್ಯಾಸಕಿ ನೂರ್ಜಾನ್‌ರವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.





