ನರಿಮೊಗರು ಗ್ರಾಮದಲ್ಲಿ ಅಶೋಕ ಜನಮನ ಉಡುಗೊರೆ ವಿತರಣೆ
ಪುತ್ತೂರು: ಈ ಬಾರಿಯ ದೀಪಾವಳಿಯಂದು ನಡೆದ ಅಶೋಕ ಜನಮನ ಕಾರ್ಯಕ್ರಮಕ್ಕೆ ಮಳೆ ಮತ್ತು ನಿರೀಕ್ಷೆಗೂ ಮೀರಿ ಜನ ಸೇರಿದ್ದರಿಂದ ಉಡುಗೊರೆ ವಿತರಣೆ ಮಾಡಲು ಕಷ್ಟಸಾಧ್ಯವಾಗಿತ್ತು, ಕಾರ್ಯಕ್ರಮಕ್ಕೆ ಬಂದ ಹಲವರು ಬರಿಗೈಯ್ಯಲ್ಲಿ ತೆರಳಿದ್ದಾರೆ ಎಂಬ ವಿಚಾರ ಗೊತ್ತಾಗಿದ್ದು ಇದರಿಂದ ಹಲವರ ಮನಸ್ಸಿಗೆ ನೋವಾಗಿದೆ ಈ ನೋವಿಗೆ ಸ್ಪಂದಿಸುವ ಉದ್ದೇಶದಿಂದ ನಾನು ಗ್ರಾಮ ಗ್ರಾಮಕ್ಕೆ ತೆರಳಿ ಉಡುಗೋರೆ ವಿತರಣೆ ಮಾಡುತ್ತಿದ್ದೇನೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.

ಶನಿವಾರ ನರಿಮೊಗರು ಹಾಗೂ ಶಾಂತಿಗೋಡು ಗ್ರಾಮದ ಜನತೆಗೆ ಪರುಷರಕಟ್ಟೆ ಜಂಕ್ಷನ್‌ನಲ್ಲಿ ಅಶೋಕ ಜನಮನ ಉಡುಗೋರೆ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಾನು ನೀಡುವ ಉಡುಗೊರೆಯ ಆಸೆಯಿಂದ ಇಲ್ಲಿ ಯಾರೂ ಬಂದಿಲ್ಲ, ನನ್ನ ಮೇಲಿನ ಪ್ರೀತಿಯಿಂದ ಬಂದಿದ್ದಾರೆ ಎಂಬ ಭಾವನೆ ನನ್ನಲ್ಲಿದೆ. ಬಡವರ ಆಶೀರ್ವಾದದಿಂದ ನಾನು ಇಂದು ಈ ಸ್ಥಾನಕ್ಕೆ ಏರಿದ್ದೇನೆ ಮುಂದೆಯೂ ನನಗೆ ಬಡವರ ಆಶೀರ್ವಾದ ಸಿಗುತ್ತದೆ ಎಂಬ ಪೂರ್ಣ ನಂಬಿಕೆ ಇದೆ. ಕಳೆದ ಅಶೋಕ ಜನಮನ ಕಾರ್ಯಕ್ರಮಕ್ಕೆ ಬಂದು ಹಲವರ ಮನಸ್ಸಿಗೆ ನೋವಾಗಿದ್ದಕ್ಕೆ ನಾನು ಆವತ್ತೆ ಕ್ಷಮೆಯನ್ನು ಕೇಳಿದ್ದೇನೆ. ಪ್ರೀತಿಯ ಕರೆಗೆ ಓಗೊಟ್ಟು ಬಂದವರು ಅಪಾರ ಸಂಖ್ಯೆಯ ಜನ ಸೇರಿದ್ದರಿಂದ ಹಲವು ಮಂದಿಗೆ ತೊಂದರೆಯಾಗಿತ್ತು ಇನ್ನು ಮುಂದಕ್ಕೆ ಆ ರೀತಿಯಾಗದಂತೆ ಎಚ್ಚರವಹಿಸುತ್ತೇವೆ ಎಂದು ಹೇಳಿದರು. ಯಾರೇ ಏನೇ ಅಪಹಾಸ್ಯ ಮಾಡಿದರೂ ಬಡವರ ಜೊತೆ ದೀಪಾವಳಿ ಕಾರ್ಯಕ್ರಮ ನಡೆಸುವುದನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ, ಮುಂದಿನ ವರ್ಷ 1.5 ಲಕ್ಷ ಮಂದಿ ಜೊತೆ ದೀಪಾವಳಿ ಆಚರಣೆ ಮಾಡುತ್ತೇನೆ ಎಂದು ಶಾಸಕರು ಹೇಳಿದರು.

ಪುತ್ತೂರು ಸೇರಿದಂತೆ ದ ಕ ಜಿಲ್ಲೆಯಲ್ಲಿ ಅನೇಕ ಮಂದಿ ಉಳ್ಳವರು ಇದ್ದಾರೆ. ಅವರಲ್ಲಿ ಸಾಕಷ್ಟು ಸಂಪತ್ತು ಇದೆ ಆದರೆ ಈ ಪೈಕಿ ಕೆಲವು ಮಂದಿ ಮಾತ್ರ ಬಡವರಿಗೆ ಸಹಾಯ ಮಾಡುವುದನ್ನು ಬಿಟ್ಟರೆ ಉಳಿದವರು ಸಹಾಯ ಮಾಡುತ್ತಿಲ್ಲ. ದೇವರು ನಮಗೆ ಕೊಟ್ಟ ಸಂಪತ್ತಿನಿಂದ ಒಂದಿಷ್ಟು ಪ್ರಮಾಣ ಬಡವರಿಗೆ, ನೊಂದವರಿಗೆ ಸಹಾಯ ಮಾಡಿದರೆ ಅದರಿಂದ ಸಿಗುವ ಆತ್ಮ ತೃಪ್ತಿ ಅಷ್ಟಿಷ್ಟಲ್ಲ. ಎಲ್ಲರೂ ಸಹಾಯ ಮಾಡಿದರೆ ಇಲ್ಲಿ ಬಡವರನ್ನು ಮೇಲಕ್ಕೆತ್ತುವುದು ಸುಲಭ ಸಾಧ್ಯವಾಗುತ್ತದೆ. ಯಾರೇ ಆಗಲಿ ಬಡವರಿಗೆ ಸಹಾಯ ಮಾಡುವ ಪೃವೃತ್ತಿ ಉಳ್ಳವರಿದ್ದರೆ ಅವರನ್ನು ಹಿಯಾಳಿಸುವ ಕೆಲಸವನ್ನು ಯಾರೂ ಮಾಡಬಾರದು ಎಂದು ಶಾಸಕರು ಹೇಳಿದರು.
ಪುರುಷರಕಟ್ಟೆ ಯಲ್ಲಿ ನಡೆದ ಅಶೋಕ ಜನಮನ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಸಾವಿರಕ್ಕೂ ಮಿಕ್ಕಿ ಜನರು ಆಗಮಿಸಿ ಉಡುಗೊರೆಯನ್ನು ಸ್ವೀಕರಿಸಿದರು. ಮಕ್ಕಳು, ಮಹಿಳೆಯರು, ಯುವಕರು, ವೃದ್ದರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ನರಿಮೊಗರು ಮ್ತತು ಶಾಂತಿಗೋಡು ಗ್ರಾಮಸ್ಥರಿಗೆ ಮಾತ್ರ ಉಡುಗೊರೆ ಪಡೆಯಲು ಅವಕಾಶ ನೀಡಲಾಗಿತ್ತು. ಮುಂದಿನ ದಿನಗಳಲ್ಲಿ ಉಳಿದ ಗ್ರಾಮಗಳಲ್ಲಿ ಉಡುಗೊರೆ ವಿತರಣೇ ನಡೆಯಲಿದೆ.
ವೇದಿಕೆಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ನರಿಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ಪೂಜಾರಿ ಕೈಂದಾಡಿ, ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರ್, ಕಾಂಗ್ರೆಸ್ ಮುಖಂಡ ವೇದನಾಥ ಸುವರ್ಣ, ಬಾಬು ಶೆಟ್ಟಿ ನರಿಮೊಗರು, ಪುಡಾ ಸದಸ್ಯರಾದ ನಿಹಾಲ್ ಪಿ ಶೆಟ್ಟಿ, ಬ್ಲಾಕ್ ಉಪಾಧ್ಯಕ್ಷ ಯಾಕೂಬ್ ಮುಲಾರ್ ಉಪಸ್ಥಿತರಿದ್ದರು. ರೈ ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಸ್ವಾಗತಿಸಿ ವಂದಿಸಿದರು.





