ಕ್ರೀಡೆ

ಬೆಂಗಳೂರು: ಇಂದಿನಿಂದ ಪ್ರೊ.ಕಬಡ್ಡಿ ಹಬ್ಬ

ಬೆಂಗಳೂರು: ಉದ್ಯಾನನಗರಿಯಲ್ಲಿ ಶುಕ್ರವಾರದಿಂದ ಕಬಡ್ಡಿ ಹಬ್ಬ ಆರಂಭವಾಗಲಿದೆ. ಶ್ರೀಕಂಠೀರವ ಕ್ರೀಡಾಂಗಣದ ಒಳಾಂಗಣದಲ್ಲಿ ವೇದಿಕೆ ಸಜ್ಜಾಗಿದೆ.

ಕೋವಿಡ್ ನಿಯಂತ್ರಣದಲ್ಲಿರುವುದರಿಂದ ಈ ಬಾರಿ ಪಂದ್ಯಗಳ ವೀಕ್ಷಣೆಗೆ ಪ್ರೇಕ್ಷಕರಿಗೆ ಪ್ರವೇಶ ನೀಡಲಾಗುತ್ತಿದೆ. ಆನ್‌ಲೈನ್‌ ಮೂಲಕ ಟಿಕೆಟ್‌ ಕೂಡ ಬಿಕರಿಯಾಗುತ್ತಿವೆ. ಒಟ್ಟು 12 ತಂಡಗಳು ಆಡಲಿವೆ. ಟೂರ್ನಿಯು ಡಬಲ್‌ ರೌಂಡ್‌ರಾಬಿನ್ ಲೀಗ್ ಹಾಗೂ ಪ್ಲೇ ಆಫ್‌ ಮಾದರಿಯಲ್ಲಿ ನಡೆಯಲಿದೆ.

ಹೋದ ಬಾರಿ ಬೆಂಗಳೂರಿನಲ್ಲಿಯೇ ಟೂರ್ನಿ ನಡೆದಿತ್ತು. ಆದರೆ ಆಗ ಕೋವಿಡ್‌ ತಡೆಗಾಗಿ ಬಯೋಬಬಲ್ ವ್ಯವಸ್ಥೆ ಇದ್ದ ಕಾರಣ ಪ್ರೇಕ್ಷಕರಿಗೆ ಅವಕಾಶ ಇರಲಿಲ್ಲ. 

ಈ ಬಾರಿ ಟೂರ್ನಿಯ ಉದ್ಘಾಟನೆ ಪಂದ್ಯದಲ್ಲಿ ಹಾಲಿ ಚಾಂಪಿಯನ್ ದಬಂಗ್ ಡೆಲ್ಲಿ ತಂಡವು ಯು
ಮುಂಬಾ ಬಳಗವನ್ನು ಎದುರಿಸಲಿದೆ. ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವು ತೆಲುಗು ಟೈಟನ್ಸ್‌ ಎದುರು ತನ್ನ ಅಭಿಯಾನ ಆರಂಭಿಸಲಿದೆ. ಈ ಬಾರಿ ಬುಲ್ಸ್ ತಂಡವನ್ನು ಡಿಫೆಂಡರ್ ಮಹೇಂದ್ರಸಿಂಗ್ ಮುನ್ನಡೆಸುವರು. 

ಕಳೆದ ಕೆಲವು ಋತುಗಳಲ್ಲಿ ತಂಡದ ಗೆಲುವಿನ ರೂವಾರಿಯಾಗಿದ್ದ ಪವನ್ ಶೆರಾವತ್ ಈ ಬಾರಿ ತಮಿಳ್ ತಲೈವಾಸ್ ತಂಡದ ನಾಯಕತ್ವ ವಹಿಸಿದ್ದಾರೆ. ಆದ್ದರಿಂದ ಬೆಂಗಳೂರು ತಂಡವು
ಹೊಸ ಪ್ರತಿಭೆಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ರೇಡರ್ ಹರ್ಮನ್‌ ಜೀತ್ ಸಿಂಗ್, ವಿಕಾಶ್ ಖಂಡೋಲಾ, ಲಾಲ್‌ ಮೊಹರ್, ಮೋರೆ ಜಿ,  ಆಲ್‌ರೌಂಡರ್
ಸಚಿನ್ ನರ್ವಾಲ್ ಅವರ ಮೇಲೆ ಭರವಸೆ ಇದೆ. 

ಟೈಟನ್ಸ್‌ ತಂಡದ ರೇಡರ್ ಸಿದ್ಧಾರ್ಥ್ ದೇಸಾಯಿ, ಅಮನ್ ಕಡಿಯಾನ್ ಅವರಿಗೆ ತಡೆಯೊಡ್ಡುವ ಸವಾಲು ಬುಲ್ಸ್‌ ರಕ್ಷಣಾ ಪಡೆಯ ಮೇಲೆ ಇದೆ.

Leave a Reply

Your email address will not be published. Required fields are marked *

error: Content is protected !!