ಸುಳ್ಯ: ತಾಕತ್ತಿದ್ದರೆ ಶಾಸಕ ಅಶೋಕ್ ರೈಯವರಿಗೆ ದಿಗ್ಬಂಧನ ಹಾಕಿ: ಬಿಜೆಪಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸವಾಲು
ಜು.14ರಂದು ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಮಂಡಲಾಧ್ಯಕ್ಷರು ಮಾಡಿದ ಭಾಷಣ ಖಂಡನೀಯ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮರು ಪತ್ರಿಕಾ ಹೇಳಿಕೆ ನೀಡಿದ್ದಾರೆ.

ವೆಂಕಟ್ ವಳಲಂಬೆಯವರು ಆಡಿದ ಮಾತುಗಳು ಸಮಾಜದ ಶಾಂತಿಯನ್ನು ಕೆದಡುವ ಮಾತುಗಳಾಗಿವೆ. ಕೀಳು ಅಭಿರುಚಿಯಿಂದ ಕೂಡಿದ ಮಾತುಗಳಾಗಿವೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರು ಸುಳ್ಯಕ್ಕೆ ಬಂದರೆ ದಿಗ್ಬಂಧನ ಹಾಕುತ್ತೇವೆ ಎಂದಿದ್ದಾರೆ. ತಾಕತ್ತಿದ್ದರೆ ಅವರು ಬಂದಾಗ ದಿಗ್ಬಂಧನ ಹಾಕಲಿ. ಕಾಂಗ್ರೆಸ್ಸಿಗರೇನು ಕೈಕಟ್ಟಿ ಕುಳಿತುಕೊಳ್ಳಲು ತಯಾರಿಲ್ಲ. ಕೆಲವು ವರ್ಷಗಳ ಹಿಂದೆ ರಮಾನಾಥ ರೈಯವರನ್ನು ಸುಳ್ಯಕ್ಕೆ ಕಾಲಿಡಲು ಬಿಡುವುದಿಲ್ಲ ಎಂದು ಸವಾಲು ಹಾಕಿದ್ದೀರಿ. ನಿಮ್ಮ ಸವಾಲಿಗೆ ಉತ್ತರವಾಗಿ ಅವರನ್ನು ಈ ಹಿಂದೆ ಕರೆಸಿದ್ದೇವೆ. ಆ ಬಳಿಕ ನಿರಂತರವಾಗಿ ಈಗಲೂ ಕರೆಸುತ್ತಿದ್ದೇವೆ. ಅದೇ ರೀತಿ ಅಗತ್ಯ ಬಿದ್ದಾಗ ಅಶೋಕ್ ಕುಮಾರ್ ರೈಯವರನ್ನು ಕೂಡಾ ಕರೆಸುತ್ತೇವೆ. ಕಲ್ಲು ಮತ್ತು ಮರಳು ಸಮಸ್ಯೆಗೆ ಸರಕಾರದ ಮಟ್ಟಿನಲ್ಲಿ ಶಾಶ್ವತ ಪರಿಹಾರ ಸಿಗುತ್ತದೆ. ಅದರ ನೆಪದಲ್ಲಿ ಕಾಂಗ್ರೆಸ್‌ಗೆ ಬೈಯುವ ನಿಮ್ಮ ನಾಲಿಗೆಗೆ ಕಡಿವಾಣ ಹಾಕಿ ಎಂಬ ಎಚ್ಚರಿಕೆಯನ್ನು ನೀಡುತ್ತಿರುವುದಾಗಿ ಪಿ.ಸಿ.ಜಯರಾಮರು ತಿಳಿಸಿದ್ದಾರೆ.





