ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯ ಬಂಧನ
ಮಂಗಳೂರು: ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ವಿಚಾರಣೆ ವೇಳೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಜಾರಿಯಾಗಿದ್ದ ಆರೋಪಿ ಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಉಡುಪಿ ಜಿಲ್ಲೆಯ ಇಂದ್ರಾಳಿ ನಿವಾಸಿ, ಪ್ರಸಕ್ತ ಧಾರವಾಡ ಜಿಲ್ಲೆಯ ಟೋಲ್ ನಾಕ, ಜನತ್ ನಗರ, 2ನೇ ಕ್ರಾಸ್ ರಸ್ತೆ ನಿವಾಸಿ ರಾಜೇಶ್ ನಾಯ್ ಯಾನೆ ರಾಜ್ ಯಾನೆ
ರಾಜು ಪಮಾಡಿ (48ವ) ಬಂಧಿತ ಆರೋಪಿ.

ಈತನ ವಿರುದ್ಧ ಮಂಗಳೂರು ನಗರದ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 4 ಕಳವು ಪ್ರಕರಣ, ಮುಲ್ಕಿ ಪೊಲೀಸ್ ಠಾಣೆಯಲ್ಲಿ 4 ಕಳವು ಪ್ರಕರಣ, ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಸಂದರ್ಭ ಸಹ ಕೈದಿಗಳಿಗೆ ಹಾಗೂ ಜೈಲ್ ಸಿಬ್ಬಂದಿಗೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ 2 ಪ್ರಕರಣಗಳು ಬರ್ಕೆ ಠಾಣೆಯಲ್ಲಿ ದಾಖಲಾಗಿವೆ. ಅಲ್ಲದೇ ಉಡುಪಿ ಜಿಲ್ಲೆಯ ಮಣಿಪಾಲ, ಹಿರಿಯಡ್ಕ, ಬೈಂದೂರು, ಉಡುಪಿ ನಗರ, ಕುಂದಾಪುರ, ಗಂಗೋಳ್ಳಿ, ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಹೊನ್ನಾವರ, ಧಾರವಾಡ ಜಿಲ್ಲೆಯ ಉಪನಗರ ಪೊಲೀಸ್ ಠಾಣೆಗಳಲ್ಲಿ ಕಳವು ಪ್ರಕರಣಗಳು ಸೇರಿದಂತೆ ಒಟ್ಟು 21 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈತನ ಮೇಲೆ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 10 ವಾರಂಟ್ ಜಾರಿಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.