ಕೆದಂಬಾಡಿ ವಲಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಅಶ್ರಫ್ ಸಾರೆಪುಣಿ ರಾಜೀನಾಮೆ
ಪುತ್ತೂರು: ಕೆದಂಬಾಡಿ ವಲಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಸಾರೆಪುಣಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಬಂಟ್ವಾಳ ತಾಲೂಕಿನಲ್ಲಿ ನಡೆದ ಅಮಾಯಕ ಯುವಕ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣ ವಿಚಾರದಲ್ಲಿ ಸರಕಾರದ ವೈಫಲ್ಯ ಮತ್ತು ಧೊರಣೆಯನ್ನು ಖಂಡಿಸಿ ತಾನು ರಾಜೀನಾಮೆ ನೀಡುವುದಾಗಿ ಅವರು ತಿಳಿಸಿದ್ದಾರೆ.
ಕೆಲವು ದಿನಗಳಿಂದ ದ.ಕ ಜಿಲ್ಲೆಯಲ್ಲಿ ನಿರಂತರವಾಗಿ ಕೋಮುದ್ವೇಷ ಭಾಷಣ, ಸಭೆ, ಪ್ರತೀಕಾರದ ಹೇಳಿಕೆಗಳು ನೀಡುತ್ತಿದ್ದರೂ ಅದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಇಲಾಖೆ ಮತ್ತು ಸರಕಾರ ವಿಫಲವಾದ ಪರಿಣಾಮ ಜಿಲ್ಲೆಯಲ್ಲಿ ಅಹಿತಕರ ಘಟನೆಗಳು ಪುನರಾವರ್ತನೆಯಾಗುತ್ತಿದೆ, ನಾವು ಶಾಂತಿ, ಸೌಹಾರ್ದತೆಯನ್ನು ಬಯಸುವವರಾಗಿದ್ದು ಅಮಾಯಕ ಯುವಕರ ಹತ್ಯೆ, ಹಲ್ಲೆ ಘಟನೆಗಳು ನಡೆಯುತ್ತಿರುವಾಗ ಅದರ ವಿರುದ್ಧ ಕಠಿಣ ಕ್ರಮ ಜರುಗಿಸಿ ಶಾಂತಿ ಸ್ಥಾಪನೆ ಮಾಡಲು ಇಲಾಖೆ ಮತ್ತು ಸರಕಾರ ವಿಫಲವಾಗಿರುವುದರಿಂದ ಮನಸ್ಸಿಗೆ ಬೇಸರ ಉಂಟಾಗಿದ್ದು ಈ ಹಿನ್ನೆಲೆಯಲ್ಲಿ ನನ್ನ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಹತ್ಯೆಯಾದ ಅಮಾಯಕ ಯುವಕನಿಗೆ ನ್ಯಾಯ ಸಿಗಬೇಕು ಮತ್ತು ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸಬೇಕು ಹಾಗೂ ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಸರಕಾರ ಮತ್ತು ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಶ್ರಫ್ ಸಾರೆಪುಣಿ ಆಗ್ರಹಿಸಿದ್ದಾರೆ.