ಕರಾವಳಿ

ಮಂಗಳೂರು :ಮಕ್ಕಳ ಹಕ್ಕುಗಳ ಮಾಸೋತ್ಸವ ಕಾರ್ಯಕ್ರಮ ಉದ್ಘಾಟನೆ

ಮಂಗಳೂರು: ಮಕ್ಕಳಿಗೆ ತಮ್ಮ ರಕ್ಷಣೆಯ ಜೊತೆಗೆ ಅರಿವನ್ನು ಮೂಡಿಸುವುದು ಮುಖ್ಯವಾಗಿದೆ. ಕಾನೂನನ್ನು ನಮ್ಮ ರಕ್ಷಣೆಗಾಗಿ ಬಳಸಿಕೊಳ್ಳಬೇಕು ಹಾಗೂ ಕಾನೂನನ್ನು ಯಾರೂ ಕೂಡ ದುರ್ಬಳಕೆ ಮಾಡಿಕೊಳ್ಳಬಾರದು. ಮಕ್ಕಳು ತಮ್ಮ ಜೀವನದಲ್ಲಿ ಮೌಲ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶೋಭಾ ಬಿ.ಜಿ ಹೇಳಿದ್ದಾರೆ.

ಇವರು ನ.20 ರಂದು ಮಂಗಳೂರಿನ ಸರಕಾರಿ ಮಹಿಳಾ ಪದವಿ ಪೂರ್ವ ಕಾಲೇಜು ಬಲ್ಮಟದಲ್ಲಿ ಮಕ್ಕಳ ಹಕ್ಕುಗಳ ಮಾಸೋತ್ಸವ ಸಮಿತಿ ದ.ಕ ಜಿಲ್ಲೆ, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ದ.ಕ, ಪಡಿ ಮಂಗಳೂರು ಇವರ ಸಹಭಾಗಿತ್ವದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದ.ಕ ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ ದ.ಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದ.ಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ದ.ಕ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕಾರ್ಮಿಕ ಇಲಾಖೆ ಮತ್ತು ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜು ಬಲ್ಮಠ ಮಂಗಳೂರು ಇವರ ಸಹಕಾರದೊಂದಿಗೆ ನಡೆದ ಮಕ್ಕಳ ಹಕ್ಕುಗಳ ಮಾಸೋತ್ಸವ 2024 ಇದರ ಉದ್ಘಾಟಕರಾಗಿ ಮಾತನಾಡಿದರು.

ಮಕ್ಕಳ ಭವಿಷ್ಯಕ್ಕೆ ಕಿವಿ ಕೊಡಿ, ಮಕ್ಕಳ ಭವಿಷ್ಯ ಕಾಪಾಡಿ” ಎಂಬ ಘೋಷಣೆಯನ್ನು ಬಿಡುಗಡೆಗೊಳಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಮಾಸಾದ್ಯಾಂತ ನಡೆಯುವ ದತ್ತು ಮಾಸಾಚರಣೆ ಪ್ರಚಾರ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಿದರು.

ಪ್ರಾಸ್ತಾವಿಕ ಮಾತನಾಡಿದ ಪಡಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ರಕ್ಷಣಾಧಿಕಾರಿ ರೆನ್ನಿ ಡಿ’ಸೋಜ ‘ಜನ ಸಮುದಾಯದ ಸಹಭಾಗಿತ್ವದಲ್ಲಿ ಮಕ್ಕಳ ಹಕ್ಕುಗಳ ಮಾಸೋತ್ಸವ ಪ್ರತೀ ವರ್ಷ ನಡೆಯುತ್ತಿದೆ. ಅಂತರಾಷ್ಟ್ರೀಯ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ 35 ವರ್ಷಗಳು ತುಂಬಿದ್ದು, ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಮಕ್ಕಳು ಬೇರೆ ಬೇರೆ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಜನಜಾಗೃತಿಗಾಗಿ ರಾಜ್ಯದ 4 ವಿಭಾಗಗಳಲ್ಲಿ ಸುಮಾರು 20 ಜಿಲ್ಲೆಗಳಲ್ಲಿ ಈ ವರ್ಷ ಮಕ್ಕಳ ಮಾಸೋತ್ಸವವನ್ನು ನಡೆಸಲು ಕಾರ್ಯ ತಂತ್ರವನ್ನು ರೂಪಿಸಲಾಗಿದ್ದು ಆ ಮೂಲಕ 18 ವರ್ಷದ ಎಲ್ಲಾ ಮಕ್ಕಳಿಗೂ ಬದುಕು, ಶಿಕ್ಷಣ ರಕ್ಷಣೆ ಸಿಗುವಂತಾಗಬೇಕೆಂದು ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಹಾಯಕ ಪೊಲೀಸ್ ಆಯುಕ್ತರು ( ಟ್ರಾಫಿಕ್) ಶ್ರೀಮತಿ ನಜಾ ಫಾರೂಖಿ ಇವರು ಭಾರತೀಯ ನ್ಯಾಯ ಸಂಹಿತೆ ಬಗ್ಗೆ, ಕಾನೂನು ಮಾಹಿತಿಯನ್ನು ನೀಡಿ ಕಾನೂನನ್ನು ಅರಿತುಕೊಳ್ಳುವ ಅವಶ್ಯಕತೆಗಳ ಬಗ್ಗೆ, ಮಾಹಿತಿ ನೀಡಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇದರ ಉಪ ನಿರ್ದೇಶಕ ವೆಂಕಟೇಶ ಪಟಗಾರರವರು ‘ಮಕ್ಕಳು ಯಾವುದೇ ಆಕರ್ಷಣೆಗೆ ಒಳಗಾಗದೆ ತಮ್ಮ ರಕ್ಷಣೆಯನ್ನು ತಾವೇ ಮಾಡಲು ಪ್ರಯತ್ನಿಸಬೇಕು ಎಂದು ಹೇಳಿದರು.

ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತರಾದ ಶ್ರೀಮತಿ ನಝೀಯಾ ಸುಲ್ತಾನ್ ಇವರು ಮಾತನಾಡಿ ‘ಬಾಲ ಕಾರ್ಮಿಕರನ್ನು ಕಂಡಲ್ಲಿ ಸಂಭಂದ ಪಟ್ಟ ಇಲಾಖೆಗೆ ತಕ್ಷಣವೇ ತಿಳಸಿ ಮಗುವಿಗೆ ಸೂಕ್ತ ರಕ್ಷಣೆಯನ್ನು ಒದಗಿಸುವಲ್ಲಿ ಸಮುದಾಯದ ಪ್ರತಿಯೊಬ್ಬರು ಕೈಜೋಡಿಸುವ ಅಗತ್ಯವಿದೆ ಎಂದು ತಿಳಿಸಿದರು.

ಮಕ್ಕಳ ಮಾಸೋತ್ಸವ ಇದರ ಸಂಚಾಲಕರಾದ ಶ್ರೀಮತಿ ಆಶಾಲತಾ ಸುವರ್ಣ ಇವರು ಸಭಾಧ್ಯಕ್ಷತೆಯನ್ನು ವಹಿಸಿದ್ದು, ಮಾಸೋತ್ಸವ ಕಾರ್ಯಕ್ರಮಕ್ಕೆ ಸರ್ಕಾರಿ ಇಲಾಖೆಗಳ ಸಹಭಾಗಿತ್ವದಲ್ಲಿ ಜನಸಮುದಾಯವನ್ನು ಮಕ್ಕಳ ಹಕ್ಕುಗಳ ನೆಲೆಯಲ್ಲಿ ಜಾಗೃತಿಗೊಳಿಸಲು
ಸಹಕರಿಸ ಬೇಕಾಗಿದೆ ಎಂದು 2024ರ ಸಾಲಿನಲ್ಲಿ ನಡೆಸಲು ಯೋಜಿಸಿರುವ ಚಟುವಟಿಕೆಗಳ ವಿವರವನ್ನು ಮಂಡಿಸಿದರು.

ವೇದಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕ ಉಸ್ಮಾನ್,ಕಾರ್ಮಿಕ ಇಲಾಖೆಯ ಕಾರ್ಮಿಕ ಅಧಿಕಾರಿ ಕುಮಾರ್ ಮತ್ತು ಶ್ರೀಮತಿ ವಿಲ್ಮಾ, ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಕುಮಾರ್, ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜು ಬಲ್ಮಠ ಮಂಗಳೂರು ಇದರ ಪ್ರಾಂಶುಪಾಲರಾದ ಶ್ರೀಮತಿ ವನಿತಾ ದೇವಾಡಿಗ, ಜಿಲ್ಲಾ ಎಸ್ ಡಿ ಎಮ್ ಸಿ ಸಮನ್ವಯ ವೇದಿಕೆಯ ಅಧ್ಯಕ್ಷರಾದ ಇಸ್ಮಾಯಿಲ್ ನೆಲ್ಯಾಡಿ, ಉಪಸ್ತಿತರಿದ್ದರು.

ಕಾರ್ಯಕ್ರಮದಲ್ಲಿ ಪಡಿ ಮಂಗಳೂರು, ಇಂಚರ ಪೌಂಡೇಶನ್ ಪ್ರಜ್ಞಾ ಸಲಹಾ ಕೇಂದ್ರ ಸಹೋದಯ, ಸಿಒಡಿಪಿ, ಸಂಚಲನ ಮಹಿಳಾ ತರಭೇತುದಾರರ ಸಂಸ್ಥೆ, ಎಸ್ ಡಿ ಎಮ್ ಸಿ ಸಮನ್ವಯ ವೇದಿಕೆ ದ. ಕ ಜಿಲ್ಲೆ, ಚೈಲ್ಡ್ ಲೈನ್ ಮಂಗಳೂರು ಮೊದಲಾದ ಸಂಸ್ಥೆಗಳ ಕಾರ್ಯಕರ್ತರು ಭಾಗವಹಿಸಿದ್ದರು.
ಕೇಂದ್ರದ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಅಧ್ಯಕ್ಷರಾದ ಕಮಲಾ ಗೌಡ ಸ್ವಾಗತಿಸಿ, ಮಂಗಳೂರು ಶಿಕ್ಷಣ ಸಂಪನ್ಮೂಲ ಕೇಂದ್ರ ಅಧ್ಯಕ್ಷರಾದ ಶ್ರೀಮತಿ ಉಷಾ ನಾಯ್ಕ ವಂದಿಸಿದರು. ಒಕ್ಕೂಟದ ಆಡಳಿತ ಮಂಡಳಿ ಸದಸ್ಯರಾದ ಶ್ರೀಮತಿ ಸುಮಂಗಲಾ ಶೆಣೈ ಮತ್ತು ಶ್ರೀಮತಿ ಪ್ರೇಮಿ ಫರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!