ನನ್ನ ಬಗ್ಗೆ ಹಗುರವಾಗಿ ಮಾತನಾಡಬೇಡಿ: ಸಂಸದ ಸುಧಾಕರ್ ಗೆ ತಿರುಗೇಟು ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ
ಬೆಂಗಳೂರು: ನನ್ನ ಬಗ್ಗೆ ಹಗುರವಾಗಿ ಮಾತನಾಡಬೇಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರ ಆಯ್ಕೆಯಲ್ಲಿ ನನ್ನ ಪಾತ್ರವಿಲ್ಲ, ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸಂಸದ ಸುಧಾಕರ್ ಅವರಿಗೆ ತಿರುಗೇಟು ನೀಡಿದ್ದಾರೆ.

23 ಜಿಲ್ಲೆಗಳ ಜಿಲ್ಲಾಧ್ಯಕ್ಷರ ಆಯ್ಕೆ ವಿರೋಧ ವಿಚಾರವಾಗಿ ಕೆಲವರು ಅಸಮಾಧಾನ ಹೊರಹಾಕಿರಬಹುದು. ಅದನ್ನು ನಾನು ತಪ್ಪು ಎನ್ನುವುದಿಲ್ಲ. ಚುನಾವಣೆ ಪ್ರಕ್ರಿಯೆ ಹೇಗೆ ನಡೆದಿದೆ ಎನ್ನುವುದನ್ನು ಹಿರಿಯರಿಗೆ ತಿಳಿಸಲು ಇಚ್ಚಿಸ್ತೇನೆ. ನಾನು ಯಾವುದೇ ಅಭಿಪ್ರಾಯ ಕೊಟ್ಟಿಲ್ಲ. ಪಕ್ಷದ ವರಿಷ್ಠರು ನನ್ನ ಅಭಿಪ್ರಾಯವನ್ನೂ ಸಹ ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ಪಕ್ಷದ ರಾಜ್ಯಾಧ್ಯಕ್ಷನಾಗಿ ಯಾವುದೇ ಜಿಲ್ಲೆಯ ಜಿಲ್ಲಾಧ್ಯಕ್ಷರ ಚುನಾವಣೆ ಪ್ರಕ್ರಿಯೆಯಲ್ಲಿ ನನ್ನ ಯಾವುದೇ ಪಾತ್ರ ಇಲ್ಲ. ರಾಜ್ಯದ ಅಧ್ಯಕ್ಷನಾಗಿ ಯಾವುದೇ ಜಿಲ್ಲೆಯ ಚುನಾವಣೆ ಸಂಬಂಧ ಅಭಿಪ್ರಾಯ ಕೊಟ್ಟಿಲ್ಲ, ಕೊಡುವುದಕ್ಕೆ ಅವಕಾಶವೂ ಇಲ್ಲ. ಕೇಂದ್ರದಿಂದ ನಮ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರಿಗೆ ಚುನಾವಣೆಯ ಜವಾಬ್ದಾರಿ ಕೊಟ್ಟಿದ್ದಾರೆ. 13 ಜನ ವೀಕ್ಷಕರನ್ನು ಕೂಡ ನೇಮಕ ಮಾಡಿದ್ದರು. ಪ್ರತಿಯೊಬ್ಬ ವೀಕ್ಷಕರಿಗೂ ಕೂಡ ಮೂರು-ಮೂರು ಜಿಲ್ಲೆಗಳ ಜವಾಬ್ದಾರಿ ಕೂಡ ನೀಡಲಾಗಿತ್ತು ಎಂದರು.