ಮಂಗಳೂರು ಪಡೀಲ್‌ನಲ್ಲಿ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ
ಮಂಗಳೂರು: ನೂತನವಾಗಿ ಉದ್ಘಾಟನೆಗೊಂಡ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಎಲ್ಲಾ ವರ್ಗದ ಜನರಿಗೂ ಕೈಗೆಟುಕುವ ರೀತಿಯಲ್ಲಿ ಗುಣಮಟ್ಟದ ಚಿಕಿತ್ಸೆ ದೊರೆಯಲಿ ಎಂದು ಸ್ಪೀಕರ್ ಯು.ಟಿ ಖಾದರ್ ಹೇಳಿದರು. ಮಂಗಳೂರು ಪಡೀಲ್‌ನಲ್ಲಿ ನಿರ್ಮಾಣಗೊಂಡಿರುವ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸೆ.30ರಂದು ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ಅಬ್ದುಲ್ ಬಶೀರ್ ಅವರು ಯುವ ವೈದ್ಯರುಗಳಿಗೆ ಸ್ಪೂರ್ತಿ ಮತ್ತು ಮಾದರಿಯಾಗಿದ್ದು ಅವರು ಬಹಳ ಕಷ್ಟಪಟ್ಟು ತಮ್ಮೂರಿನ ಜನರಿಗೆ ಉತ್ತಮವಾದ ಗುಣಮಟ್ಟದ ಚಿಕಿತ್ಸೆ ಸಿಗಲೆಂದು ಸುಸಜ್ಜಿತವಾದ ಆಸ್ಪತ್ರೆಯನ್ನು ನಿರ್ಮಾಣ ಮಾಡಿದ್ದಾರೆ ಎಂದು ಯುಟಿ ಖಾದರ್ ಹೇಳಿದರು. ಆಸ್ಪತ್ರೆಗಳನ್ನು ಸ್ಥಾಪಿಸಲು ಅದೆಷ್ಟು ಕಷ್ಟವಿದೆ ಎಂದು ಅದರ ಸ್ಥಾಪಕರಿಗೆ ಮಾತ್ರ ತಿಳಿದಿರುವ ವಿಚಾರ. ಆಸ್ಪತ್ರೆ ಸಹಿತ ಯಾವುದೇ ಉದ್ಯಮಗಳು ಸ್ಥಾಪನೆಯಾದಾಗ ಸ್ಥಳೀಯರು ಎಲ್ಲಾ ರೀತಿಯ ಸಹಕಾರವನ್ನು ನೀಡಬೇಕು ಎಂದು ಅವರು ಹೇಳಿದರು.
ತಾಯಿ ಮತ್ತು ಮಗುವಿನ ವಿಶೇಷ ಆರೈಕೆ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ರುದ್ರಪ್ಪಪಾಟೀಲ್, ಹೆಲ್ತ್ ಹಬ್ ಆಗಿರುವ ಮಂಗಳೂರಿನಲ್ಲಿ ಡಾ. ಅಬ್ದುಲ್ ಬಶೀರ್ ಅವರು ಧೈರ್ಯ ವಹಿಸಿ ಆಸ್ಪತ್ರೆಯನ್ನು ನಿರ್ಮಿಸಿದ್ದಾರೆ. ಹಣ ಗಳಿಕೆಯ ಉದ್ದೇಶಕ್ಕಿಂತ ಸೇವಾ ಮಾನೋಭಾವವನ್ನು ಅವರು ಹೊಂದಿದ್ದಾರೆ. ಟ್ರೀಟ್‌ಮೆಂಟ್ ಫಸ್ಟ್ ಮತ್ತು ಪೇಮೆಂಟ್ ನೆಕ್ಸ್ಟ್ ಎಂದು ಆರಂಭದಲ್ಲೇ ಹೇಳಿದ್ದಾರೆ. ಹಾಗಾಗಿ ಈ ಆಸ್ಪತ್ರೆಯಲ್ಲಿ ಗುಣಮಟ್ಟದ ಸೇವೆ ಸಿಗಲಿದೆ ಎನ್ನುವ ವಿಶ್ವಾಸ ನನಗಿದೆ ಎಂದು ಹೇಳಿದರು.
ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಅಧ್ಯಕ್ಷ ಡಾ.ಅಬ್ದುಲ್ ಬಶೀರ್ ವಿ.ಕೆ ಅವರು ಹುಟ್ಟೂರಿನ ಜನತೆಗೆ ಸೇವೆ ನೀಡುವ ಉದ್ದೇಶಕ್ಕೆ ಮಂಗಳೂರಿನ ಪಡೀಲಿನಲ್ಲಿ ಸುಸಜ್ಜಿತವಾದ ಆಸ್ಪತ್ರೆಯನ್ನು ನಿರ್ಮಿಸಿದ್ದೇವೆ. ನಮ್ಮ ಆಸ್ಪತ್ರೆಯಲ್ಲಿ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ತುರ್ತು ಪರಿಹಾರ ಒದಗಿಸಲು ನುರಿತ ವೈದ್ಯಕೀಯ ತಜ್ಞರು ಸಿದ್ದರಿದ್ದಾರೆ. 130 ಬೆಡ್ ವ್ಯವಸ್ಥೆಯನ್ನು ಹೊಂದಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಿನದ 24 ಗಂಟೆ ಸೇವೆಗಳು ಲಭ್ಯವಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಹಾಸನ ಸಂಸದ ಶ್ರೇಯಸ್ ಪಾಟೀಲ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಮಂಜೇಶ್ವರ ಎ.ಕೆ.ಎಂ.ಅಶ್ರಫ್, ಎಂಎಲ್ಸಿ ಐವನ್ ಡಿಸೋಜ, ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹೀಂ, ರಾಜ್ಯದ ಮಾಜಿ ಸಚಿವರಾದ ಬಿ. ರಮಾನಾಥ ರೈ, ವಿನಯಕುಮಾರ್ ಸೊರಕೆ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಮಾಜಿ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಎಸ್‌ಡಿಪಿಐ ದ.ಕ. ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಬಜತ್ತೂರು, ಡಾ. ಯೂಸುಫ್ ಕುಂಬಳೆ, ದ.ಕ.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರೇರಣಾ ತರಬೇತುದಾರ ರಫೀಕ್ ಮಾಸ್ಟರ್, ಕಾಂಗ್ರೆಸ್ ಮುಖಂಡರಾದ ಎಂ.ಎಸ್.ಮುಹಮ್ಮದ್, ಎನ್.ಎಸ್.ಕರೀಂ, ಉದ್ಯಮಿ ಅಬ್ದುಲ್ಲಾ ಮಾದುಮೂಲೆ ಭಾಗವಹಿಸಿದ್ದರು.
ವೇದಿಕೆಯಲ್ಲಿ ಡಾ. ನುಮಾನ್, ಡಾ.ಶಾರೂಕ್ ಅಬ್ದುಲ್ಲಾ, ನಸ್ರೀನ್ ಬಶೀರ್, ಅಬ್ದುಲ್ ಖಾದರ್ ಹಾಜಿ, ಡಾ. ಸಂಶೀರ್, ಡಾ. ಶಾಮಿಲ್, ಡಾ. ನಫ್ಸೀರ್, ಡಾ. ಮೋಹನ್, ಶಾಕಿರ್ ಹಾಜಿ, ಅರ್ಜುನ್ ಭಂಡಾರ್ಕರ್ ಮತ್ತಿತರರು ಉಪಸ್ಥಿತರಿದ್ದರು.
ಆಸ್ಪತ್ರೆಯ ನಿರ್ದೇಶಕ ಮತ್ತು ಸಿಇಒ ಡಾ. ಕಿರಾಶ್ ಪರ್ತಿಪ್ಪಾಡಿ ಪ್ರಸ್ತಾವನೆಗೈದರು. ಜನಪ್ರಿಯ ಫೌಂಡೇಶನ್ ನಿರ್ದೇಶಕ ನುಮಾನ್ ಆಸ್ಪತ್ರೆಯ ವಿಶೇಷತೆ ಬಗ್ಗೆ ಮಾಹಿತಿ ನೀಡಿದರು. ಇರ್ಶಾದ್ ಮತ್ತು ಸೈಫ್ ಕಿರಾಅತ್ ಪಠಿಸಿದರು. ನಿರ್ದೇಶಕ ಶಾರೂಕ್ ಅಬ್ದುಲ್ಲ ವಂದಿಸಿದರು. ಶರ್ಮಿಳಾ ಕಾರ್ಯಕ್ರಮ ನಿರೂಪಿಸಿದರು.