ಸಾಲ್ಮರ ಮೌಂಟನ್ ವ್ಯೂ ಅಸ್ವಾಲಿಹಾ ಕಾಲೇಜಿನಲ್ಲಿ “ಗ್ರಾಟಿಟ್ಯೂಡ್” ಕಾರ್ಯಕ್ರಮ
ಪುತ್ತೂರು: ವಿದ್ಯಾರ್ಥಿಗಳು ನಿರಂತರ ಕ್ರಿಯಾಶೀಲತೆ ಯನ್ನು ಮೈಗೂಡಿಸಿಕೊಂಡು ಯಶಸ್ಸಿನ ಕನಸು ಕಂಡರೆ ಮಾತ್ರ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಪುತ್ತೂರು ಎಜುಕೇಷನಲ್ ಎಕ್ಸಲೆನ್ಸ್ ಫೌಂಡೇಶನ್ ಅಧ್ಯಕ್ಷ ಅಮ್ಜದ್ ಖಾನ್ ಪೋಳ್ಯ ಹೇಳಿದರು.
ಸಾಲ್ಮರ ಮೌಂಟನ್ ವ್ಯೂ ಅಸ್ವಾಲಿಹಾ ವುಮೆನ್ಸ್ ಕಾಲೇಜ್ ನಲ್ಲಿ ನಡೆದ “ಗ್ರಾಟಿಟ್ಯೂಡ್” ಕಾರ್ಯಕ್ರಮದಲ್ಲಿ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು. ಪ್ರಗತಿ ಸಾಧಿಸಬೇಕಾದರೆ ಶಿಕ್ಷಣ ಅಗತ್ಯ ಈ ನಿಟ್ಟಿನಲ್ಲಿ ಮೌಂಟನ್ ವ್ಯೂ ಶಿಕ್ಷಣ ಸಂಸ್ಥೆಗಳ ಸೇವಾ ಸಾಧನೆ ಶ್ಲಾಘನೀಯ ಎಂದ ಅವರು, ಕಲಿಕೆಗೆ ಬಡತನ ಅಡ್ಡಿಯಾಗಬಾರದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಯು. ಮುಹಮ್ಮದ್ ಹಾಜಿ ಪಡೀಲ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಹಾಜಿ ಮುಹಮ್ಮದ್ ಸಾಬ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮೌಂಟನ್ ವ್ಯೂ ಅಸ್ವಾಲಿಹಾ ವುಮೆನ್ಸ್ ಕಾಲೇಜ್ ನ ಉಸ್ತಾದ್ ಕೆ.ಎಂ.ಎ.ಕೊಡುಂಗಾಯಿ ಫಾಝಿಲ್ ಹನೀಫಿ ಅವರು ಪ್ರಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ವಿದ್ಯಾರ್ಥಿನಿಯರ ಶೈಕ್ಷಣಿಕ ಸಾಧನೆಯ ಬಗ್ಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಅನಿವಾಸಿ ಉದ್ಯಮಿ ಅಮ್ಜದ್ ಖಾನ್ ಮತ್ತು ಪವಿತ್ರ ಉಮ್ರಾ ಯಾತ್ರೆ ಕೈಗೊಳ್ಳುವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ಪಡೀಲ್ ಅವರನ್ನು ಸಂಸ್ಥೆಯ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಮೌಂಟನ್ ವ್ಯೂ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥೆ ಝುಲೈಖಾಬಿ, ಸಾಲ್ಮರ ಕನ್ನಡ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಮೋಹನಾಂಗಿ, ಶಾಲಾ ದೈಹಿಕ ಶಿಕ್ಷಕ ಅಶ್ರಫ್ ,ಕಾರ್ಯಾಲಯ ನಿರ್ವಾಹಕ ಅಬ್ದುಲ್ ಹಮೀದ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕಿ ಸಾಜಿದಾ ಸ್ವಾಗತಿಸಿದರು. ಮಿಶ್ರಿಯಾ ಅಸ್ವಾಲಿಹಾ ವಂದಿಸಿದರು. ಶಿಕ್ಷಕ ಅಬ್ದುರ್ರವೂಫ್ ಕಾರ್ಯಕ್ರಮ ನಿರ್ವಹಿಸಿದರು. ಕಾಲೇಜಿನ ಉಪನ್ಯಾಸಕಿಯರು ಮತ್ತು ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.