ಕರಾವಳಿಕ್ರೈಂ

ಹಾಡು ಹಗಲೇ ಅಮಾಯಕರಿಗೆ ಟೋಪಿ ಹಾಕುತ್ತಿರುವ ವಂಚಕರು

ಸುಳ್ಯ: ಮೋದಿ ಯೋಜನೆ ಹೆಸರು ಹೇಳಿ ಚಿನ್ನದ ಉಂಗುರ ಪಡೆದ ವಂಚಕ ಪರಾರಿ

ಸುಳ್ಯ: ಇತ್ತೀಚಿಗೆ ಖದೀಮರು ಬೇರೆ ಬೇರೆ ರೀತಿಯಲ್ಲಿ ಜನರನ್ನು ವಂಚನೆ ಮಾಡುತ್ತಿರುವ ವರದಿಗಳು ಮಾಧ್ಯಮಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಗೊಳ್ಳುತ್ತಿದೆ. ಆದರೂ ಕೂಡ ಮೋಸ ಮಾಡುವವರು ಸಂಖ್ಯೆ ಹೆಚ್ಚುತ್ತಲೆ ಹೋಗುತ್ತಿದೆ, ಮೋಸ ಹೋಗುವವರು ಕೂಡ ಹೆಚ್ಚುತ್ತಲೇ ಇದ್ದಾರೆ.

ಕೆಲವು ದಿನಗಳ ಹಿಂದೆ ಬೆಳ್ಳಾರೆ ಪೇಟೆಯಲ್ಲಿ
ಅಪರಿಚಿತ ವ್ಯಕ್ತಿಯೋರ್ವ ಮೋದಿಯವರ ಹಣ ಅಕೌಂಟಿಗೆ ಬರುತ್ತದೆ ಎಂದು ಆಸೆ ತೋರಿಸಿ, ಅದನ್ನು ಪಡೆಯಲು ಬ್ಯಾಂಕಿಗೆ ಕಟ್ಟಲು ಸ್ವಲ್ಪ ಹಣ ಬೇಕೆಂದು ನಂಬಿಸಿ ಇಬ್ಬರಿಂದ ತಲಾ ಎರಡು ಸಾವಿರ ರೂ ಹಣ ಪಡೆದುಕೊಂಡು ಪರಾರಿಯಾಗಿದ್ದ ಘಟನೆ ವರದಿಯಾಗಿದ್ದವು.

ಇದೀಗ ಅದೇ ರೀತಿಯ ಘಟನೆಯೊಂದು ಮತ್ತೊಮ್ಮೆ ಬೆಳ್ಳಾರೆ ಪೇಟೆಯಲ್ಲಿ ಮರುಕಳಿಸಿದ್ದು ಈ ಬಾರಿ ಖದೀಮ ಅಮಾಯಕ ವ್ಯಕ್ತಿಯೋರ್ವರ ಚಿನ್ನದ ಉಂಗುರವನ್ನು ಎಗರಿಸಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಮೇ. 20 ರಂದು ಬೆಳ್ಳಾರೆ ಪೇಟೆಯಲ್ಲಿ ಕೊಡಿಯಾಲದ ರಾಧಾಕೃಷ್ಣ ಎಂಬವರಲ್ಲಿ ಅಪರಿಚಿತರೋರ್ವರು ಮೋದಿಯ ಹೆಸರು ಹೇಳಿ ನನ್ನ ಅಕೌಂಟಿಗೆ ಹಣ ಬಂದಿದೆ. ಅದನ್ನು ತೆಗೆಯಲು ಮೆನೇಜರ್ ರಿಗೆ ಕೊಡಲು ನನಗೆ 7 ಸಾವಿರ ರೂ ಬೇಕಾಗಿದೆ ಎಂದು ಕೇಳಿದರೆನ್ನಲಾಗಿದೆ.

ಪರಿಚಯ ಇದ್ದವರಂತೆ ಮಾತನಾಡಿದ ಆ ವ್ಯಕ್ತಿ
ಹಣ ಇಲ್ಲವೆಂದರೂ ಬಿಡದೆ ಸ್ವಲ್ಪವಾದರೂ ಕೊಡಿ ಎಂದು ಪಟ್ಟುಹಿಡಿದರೆನ್ನಲಾಗಿದೆ.
ಆಗ ರಾಧಾಕೃಷ್ಣರವರು ನನ್ನಲ್ಲಿ 2 ಸಾವಿರ ರೂಪಾಯಿಗಳು ಮಾತ್ರ ಇದೆ ಎಂದು ಹೇಳಿದರು. ಆಗ ಇದು ಸಾಕಾಗುವುದಿಲ್ಲ ಎಂದು ಹೇಳಿದ ಅಪರಿಚಿತ ರಾಧಾಕೃಷ್ಣ ರವರ ಕೈಯಲ್ಲಿದ್ದ ಚಿನ್ನದ ಉಂಗುರದ ಮೇಲೆ ಕಣ್ಣಿಟ್ಟಿದ್ದಾನೆ.

ಕೆಲ ಹೊತ್ತು ಮಾತನಾಡಿದ ಬಳಿಕ ನಿಮ್ಮ ಕೈಯಲ್ಲಿದ್ದ ಉಂಗುರ ತೆಗೆದು ಕೊಡಿ ಎಂದು ಅಪರಿಚಿತ ಹೇಳಿದರೆನ್ನಲಾಗಿದ್ದು ಆಗ ರಾಧಾಕೃಷ್ಣರವರು ತನ್ನ ಕೈಯಲ್ಲಿದ್ದ ಉಂಗುರವನ್ನು ತೆಗೆದುಕೊಟ್ಟರು.
ಉಂಗುರ ತೆಗೆದುಕೊಟ್ಟ ಕೂಡಲೇ ಆ ವ್ಯಕ್ತಿ ನೀವು 50 ರೂಪಾಯಿಯ ಠಸೆ ಪೇಪರು ತನ್ನಿ ನಾವು ಮತ್ತೆ ಒಟ್ಟಿಗೆ ಬ್ಯಾಂಕಿಗೆ ಹೋಗುವ ಈಗ ನಾನು ಇಲ್ಲೆ ಇರುತ್ತೇನೆ ಎಂದು ಹೇಳಿದರೆನ್ನಲಾಗಿದೆ.

ರಾಧಾಕೃಷ್ಣರವರು ಠಸೆ ಪೇಪರು ತರಲು ಸ್ವಲ್ಪ ದೂರ ನಡೆದು ಹೋಗುವಾಗ ಇವರಿಗೆ ಸಂಶಯ ಬಂದು ವಾಪಾಸು ತಿರುಗಿ ಬರುವಾಗ ಅಪರಿಚಿತ ಪರಾರಿಯಾಗಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!