ಕಬಕ: ವಿದ್ಯೆ ಕಲಿಸಿದ ಗುರುವಿಗೆ ಹೊಸ ಬೈಕ್ ಉಡುಗೊರೆ ನೀಡಿ ಬೀಳ್ಕೊಟ್ಟ ಶಿಷ್ಯಂದಿರು
ಪುತ್ತೂರು: ತಮಗೆ ವಿದ್ಯೆ ಕಲಿಸಿದ ಗುರುವೊಬ್ಬರಿಗೆ ಬೀಳ್ಕೊಡುಗೆ ಉಡುಗೊರೆಯಾಗಿ ಹೊಸ ಬೈಕ್ ನೀಡಿರುವ ವಿದ್ಯಮಾನ ಕಬಕ ಸುಲ್ತಾನ್ ನಗರದಲ್ಲಿ ನಡೆದಿದೆ.

ಸುಲ್ತಾನ್ ನಗರ ಮದ್ರಸದಲ್ಲಿ ಕಳೆದ 14 ವರ್ಷಗಳಿಂದ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಆಸಿಫ್ ಝುಹ್ರಿ ಅವರು ಮದ್ರಸ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುತ್ತಿದ್ದುದಲ್ಲದೇ ಊರವರ ಜೊತೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡು ಊರವರ ಅಚ್ಚುಮೆಚ್ಚಿನ ಉಸ್ತಾದ್ ಆಗಿ ಗುರುತಿಸಿಕೊಂಡಿದ್ದರು. ಅವರ ಹಿರಿಯ ವಿದ್ಯಾರ್ಥಿಗಳು ನಾನಾ ಊರುಗಳಲ್ಲಿ, ವಿದೇಶಗಳಲ್ಲಿ ಉದ್ಯೋಗದಲ್ಲಿದ್ದು ಅವರಲ್ಲಿ ಬಹುತೇಕರು ಇವರ ಜೊತೆ ಈಗಲೂ ನಿಕಟ ಸಂಪರ್ಕವನ್ನು ಇಟ್ಟುಕೊಂಡಿದ್ದರು.

ಆಸಿಫ್ ಝುಹ್ರಿ ಅವರು ಇದೀಗ ಸುಲ್ತಾನ್ ನಗರ ಮದರಸದಿಂದ ವಿದಾಯ ಹೇಳಿ ಬೇರೆಡೆಗೆ ಕರ್ತವ್ಯಕ್ಕೆ ತೆರಳಿದ್ದಾರೆ. ತಮ್ಮ ಊರಿನಲ್ಲಿ ಸುಧೀರ್ಘ 14 ವರ್ಷ ಸೇವೆ ಸಲ್ಲಿಸಿರುವ ಉಸ್ತಾದರನ್ನು ಗೌರವಪೂರ್ವಕವಾಗಿ ಬೀಳ್ಕೊಡಬೇಕು ಎಂದು ನಿರ್ಧರಿಸಿದ ಸಿರಾಜುಲ್ ಹುದಾ ಸ್ಟೂಡೆಂಟ್ ಫೆಡರೇಷನ್‌ನವರು ಎಲ್ಲರನ್ನು ಒಟ್ಟುಗೂಡಿಸಿಕೊಂಡು ಆಸಿಫ್ ಝುಹ್ರಿ ಅವರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿದ್ದಾರೆ. ತಮ್ಮ ಅಚ್ಚುಮೆಚ್ಚಿನ ಉಸ್ತಾದರಿಗೆ ರೂ 1.4 ಲಕ್ಷದ ಬೈಕ್‌ನ್ನು ಉಡುಗೊರೆಯಾಗಿ ನೀಡಿದ್ದು ಆ ಮೂಲಕ ಆಸಿಫ್ ಝುಹ್ರಿ ಅವರ ಬೀಳ್ಕೊಡುಗೆ ಸಮಾರಂಭವನ್ನು ಅವಿಸ್ಮರಣೀಯವಾಗಿಸಿದ್ದಾರೆ. ಇದು ಸ್ಥಳೀಯವಾಗಿ ಪ್ರಶಂಸೆಗೂ ಪಾತ್ರವಾಗಿದೆ. ಶಿಷ್ಯ ವರ್ಗದವರು ನೀಡಿದ ಬೈಕ್ ಸ್ವೀಕರಿಸಿದ ಆಸಿಫ್ ಝುಹ್ರಿ ಸಂತಸಗೊಂಡಿದ್ದಾರೆ. ಒಟ್ಟಿನಲ್ಲಿ ತಮ್ಮ ಗುರುವಿಗೆ ಗೌರವಪೂರ್ವಕ ಬೀಳ್ಕೊಡುಗೆ ಏರ್ಪಡಿಸಿದ ಸುಲ್ತಾನ್ ನಗರದ ಯುವಕರ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.