ದಿಢೀರ್ ನಾಪತ್ತೆಯಾದ ವಿದ್ಯಾರ್ಥಿ: ತಡ ರಾತ್ರಿ ಶಾಸಕ ಅಶೋಕ್ ರೈ ಸ್ಪಂದನೆ- ಬಾಲಕ ಪತ್ತೆ
ಪುತ್ತೂರು:ಮನೆಯಿಂದ ಪೇಟೆಗೆಂದು ಬಂದ ಬಾಲಕ ದಿಡೀರನೆ ನಾಪತ್ತೆಯಾಗಿದ್ದು ಮನೆಯವರ ಹುಡುಕಾಟದ ಬಳಿಕ ಬೆಂಗಳೂರಿನಲ್ಲಿ ಪತ್ತೆಯಾದ ಘಟನೆ ಉಪ್ಪಿನಂಗಡಿ ಆದರ್ಶ ನಗರದಲ್ಲಿ ನಡೆದಿದೆ.
ಆದರ್ಶ ನಗರ ನಿವಾಸಿ ಬಾಲಕ ಜ.17ರಂದು ಸಂಜೆ ಸುಮಾರು ಏಳು ಗಂಟೆಗೆ ಮನೆಯಿಂದ ಉಪ್ಪಿನಂಗಡಿ ಹೋಗಿ ಬರುವುದಾಗಿ ಬಂದಿದ್ದಾನೆ. ಆ ಬಳಿಕ ರಾತ್ರಿ ಸುಮಾರು 11 ಗಂಟೆಯವರೆಗೂ ಮನೆಗೆ ಮರಳಿ ಬಂದಿರಲಿಲ್ಲ. ಇದರಿಂದ ಆತಂಕಗೊಂಡ ಮನೆಯವರು ರಾತ್ರಿ ಉಪ್ಪಿನಂಗಡಿಯಲ್ಲಿ ಹುಡುಕಾಟ ನಡೆಸಿದ್ದಾರೆ, ಬಾಲಕ ಎಲ್ಲಿಯೂ ಪತ್ತೆಯಾಗದ ವಿಚಾರ ತಿಳಿದು ರಾತ್ರಿ ಶಾಸಕರಾದ ಅಶೋಕ್ ರೈ ಯವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಶಾಸಕರು ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿ ನಾಪತ್ತೆಯಾದ ಬಾಲಕನ ವಿವರಣೆಯನ್ನು ನೀಡಿದ್ದರು. ಶಾಸಕರ ಸೂಚನೆಯಂತೆ ಪೊಲೀಸರು ವಿವಿಧ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣಗಳಿಗೆ ಮಾಹಿತಿ ರವಾನೆ ಮಾಡಿದ್ದರು. ಹುಡುಕಾಟದ ವೇಳೆ ನಾಪತ್ತೆಯಾದ ಬಾಲಕ ಬೆಳಿಗ್ಗಿನ ಜಾವ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದ್ದಾನೆ. ಆತನನ್ನು ಕರೆದುಕೊಂಡು ಬರಲು ಪೋಷಕರು ಬೆಂಗಳೂರಿಗೆ ತೆರಳಿದ್ದಾರೆ. ತಡ ರಾತ್ರಿ ಕರೆ ಮಾಡಿದಾಗಲೂ ತುರ್ತು ಸ್ಪಂದನೆ ನೀಡುವ ಮೂಲಕ ಬಾಲಕನ ಪತ್ತೆಗೆ ನೆರವು ನೀಡಿದ ಶಾಸಕರಿಗೆ ಕುಟುಂಬಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.