ಕರಾವಳಿ

ಬಡ ಟೈಲರ್‌ಗಳ ಬೇಡಿಕೆಯ ಬಗ್ಗೆ ವಿಧಾನಸಭೆಯಲ್ಲಿ ಧ್ವನಿ ಎತ್ತುವೆ: ಶಾಸಕ ಅಶೋಕ್ ರೈಪುತ್ತೂರು: ಆಧುನಿಕ ಜಗತ್ತಿನಲ್ಲಿ ಫ್ಯಾಷನ್ ಉಡುಗೆ ಬಂದರೂ ಜನರು ಮಾತ್ರ ತಮ್ಮ ಹಳೆಯ ಶೈಲಿಯ ಬಟ್ಟೆ ಧರಿಸುವುದನ್ನು ಹಾಗೆಯೇ ಉಳಿಸಿಕೊಂಡು ಬಂದಿದ್ದು ಇದು ಭಾರತೀಯ ಸಂಸ್ಕೃತಿಯ ಮೆರುಗಾಗಿದೆ, ಅನಾಧಿ ಕಾಲದಿಂದಲೂ ಟೈಲರಿಂಗ್ ವೃತ್ತಿ ಮಾಡಿಕೊಂಡೇ ಬದುಕನ್ನು ಕಟ್ಟಿದ ಅನೇಕರು ನಮ್ಮ ಸಮಾಜದಲ್ಲಿ ಇದ್ದಾರೆ. ಟೈಲರಿಂಗ್ ವೃತ್ತಿಯನ್ನು ಮಾಡಿಕೊಂಡು ಬಡತನದಲ್ಲೇ ಜೀವನ ಸಾಗಿಸುವ ಕುಟುಂಬಗಳೂ ಇದೆ, ಟೈಲರಿಂಗ್ ವೃತ್ತಿ ಮಾಡುವ ಬಡ ಟೈಲರ್‌ಗಳಿಗೆ ಜೀವನಕ್ಕೆ ಭದ್ರತೆ ನೀಡಬೇಕಾದ ಅವಶ್ಯಕತೆ ಇದ್ದು ನಿಮ್ಮ ಬೇಡಿಕೆಗಳ ಬಗ್ಗೆ ವಿಧಾನಸಭೆಯನ್ನು ಧ್ವನಿ ಎತ್ತುವ ಮೂಲಕ ಸರಕಾರದ ಗಮನಕ್ಕೆ ತರುತ್ತೇನೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.


ಅವರು ಜು.30ರಂದು ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಕರ್ನಾಟಕ ಸ್ಟೇಟ್ ಟೈಲರ್‍ಸ್ ಎಸೋಸಿಯೇಶನ್ ಇದರ ಪುತ್ತೂರು ಕ್ಷೇತ್ರ ಸಮಿತಿಯ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಟೈಲರಿಂಗ್ ವೃತ್ತಿಗೆ ಇಂದು ಆಧುನಿಕತೆಯ ಟಚ್ ದಾಳಿ ಮಾಡಿದೆ. ಹೊರ ಜಿಲ್ಲೆಗಳಿಂದ ಬರುವ ಫ್ಯಾಷನ್ ಡಿಸೈನ್ ವೃತ್ತಿಯವರು ದುಬಾರಿ ಬೆಲೆಗೆ ಟೈಲರಿಂಗ್ ಕೆಲಸವನ್ನು ಮಾಡುತ್ತಿದ್ದಾರೆ, ಟೈಲರಿಂಗ್ ವೃತ್ತಿಯಲ್ಲೇ ಜೀವನ ಕಟ್ಟಿಕೊಂಡ ಅನೇಕರೂ ಇದ್ದಾರೆ. ಆದರೆ ಬಡ ಟೈಲರ್‌ಗಳು ಅಂದಿನಿಂದ ಇಂದಿನ ತನಕ ಬಡವನಾಗಿಯೇ ತನ್ನ ಕಸುಬನ್ನು ಮಾಡುತ್ತಿದ್ದು ಅವರಿಗೆ ಸರಕಾರದಿಂದ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ ಎಂಬ ವಿಚಾರ ನನ್ನ ಗಮನಕ್ಕೆ ಬಂದಿದೆ. ಕಾರ್ಮಿಕ ಇಲಾಖೆ ವ್ಯಾಪ್ತಿಗೆ ಟೈಲರಿಂಗ್ ಕಾರ್ಮಿಕರನ್ನು ಸೇರಿಸುವ ಬಗ್ಗೆ ತಾನು ಆ ಇಲಾಖೆಯ ಸಚಿವರ ಜೊತೆ ಮಾತುಕತೆ ನಡೆಸಿ ತನ್ನಿಂದಾಗುವ ಎಲ್ಲಾ ಸಹಾಯವನ್ನು ಮಾಡುವುದಾಗಿ ಶಾಸಕರು ಸಭೆಯಲ್ಲಿ ಭರವಸೆ ನೀಡಿದರು.


ಕಳೆದ 24 ವರ್ಷಗಳಿಂದ ತಮ್ಮ ಬೇಡಿಕೆಯನ್ನು ಸರಕಾರದ ಮುಂದಿಟ್ಟಿದ್ದರೂ ಇದುವರೆಗೂ ಅದನ್ನು ಯಾವುದೇ ಸರಕಾರ ಪರಿಗಣಿಸಿಲ್ಲ ಎಂದು ಸಮಿತಿಯ ಪ್ರಮುಖರು ಶಾಸಕರ ಗಮನಕ್ಕೆ ತಂದರು. ಈ ವೇಳೆ ಪ್ರತಿಕ್ರಿಯೆ ನೀಡಿದ ಶಾಸಕರು ಸಭೆಯಲ್ಲಿ , ಸಾರ್ವಜನಿಕ ವೇದಿಕೆಯಲ್ಲಿ ನಾವು ಬೊಬ್ಬೆ ಹೊಡೆದರೆ ಯಾವುದೇ ಪ್ರಯೋಜನವಿಲ್ಲ ಮಾತನಾಡುವಲ್ಲಿ ಮಾತನಾಡಬೇಕು, ಕೇಳುವವರಲ್ಲಿ ಕೇಳಿದರೆ ಅದಕ್ಕೆ ಪರಿಹಾರ ಸಿಗಬಹುದು ಮತ್ತು ಬೇಡಿಕೆಯನ್ನು ಈಡೇರಿಸಿಕೊಳ್ಳಬಹುದು ಈ ನಿಟ್ಟಿನಲ್ಲಿ ತಾನು ಖಂಡಿತಾ ಪ್ರಯತ್ನ ಪಡುವುದಾಗಿ ಶಾಸಕರು ಹೇಳಿದರು.


ಪುತ್ತೂರು ಕ್ಷೆತ್ರ ಸಮಿತಿಯ ಅಧ್ಯಕ್ಷರಾದ ಜಯರಾಮ ಬಿ ಎನ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕೆಎಸ್‌ಟಿ ರಾಜ್ಯ ಸಮಿತಿ ಅಧ್ಯಕ್ಷರಾದ ಬಿ ಎ ನಾರಾಯಣ, ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಎ ಪ್ರಜ್ವಲ್‌ಕುಮಾರ್, ಜಿಲ್ಲಾ ಸಮಿತಿ ಅಧ್ಯಕ್ಷರಾದ ಜಯಂತ ಉರ್ಲಾಂಡಿ, ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಲಿಗೋಧರ ಆಚಾರ್ಯ, ಜಿಲ್ಲಾ ಸಮಿತಿ ಕೋಶಾಧಿಕಾರಿ ಈಶ್ವರಕುಲಾಲ್,ಪುತ್ತೂರು ಸಮಿತಿ ಕಾರ್ಯದರ್ಶಿ ಉಮಾ ಯು ನಾಯ್ಕ್, ಕೋಶಾಧಿಕಾರಿ ಸುಜಾತಾ ಮಂದಾರ, ಪ್ರೇಮಲತಾ ಶೆಟ್ಟಿ, ದಾಮೋದರ ಶೆಟ್ಟಿಗಾರ್, ಕೇಶವ ಕದ್ರಿ, ಯಶೋಧರ್ ಜೈನ್, ನಾಗೇಶ್ ಕುಲಾಲ್ ಉಪಸ್ಥಿತರಿದ್ದರು.

ರಾಜ್ಯ ಸಮಿತಿ ಆಂತರಿಕ ಲೆಕ್ಕಪರಿಸೋಧಕರಾದ ಬಿ ರಘುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಉಮಾನಾಯ್ಕ್ ವಂದಿಸಿದರು. ಶಂಭು ಬಲ್ಯಾಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕೆಎಸ್‌ಟಿ ವತಿಯಿಂದ ಶಾಸಕರಿಗೆ ಸನ್ಮಾನ ಕಾರ್ಯಕ್ರಮ ಮತ್ತು ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.

Leave a Reply

Your email address will not be published. Required fields are marked *

error: Content is protected !!