ಕರಾವಳಿ

ಕಡಬದಲ್ಲಿ ಕೂಡಲೇ ವಿವಿಧ ಇಲಾಖೆಗಳ ಕಚೇರಿಗಳನ್ನು ತೆರೆಯಲು ಒತ್ತಾಯಿಸಿ ಮೀರಾ ಸಾಹೇಬ್ ನೇತೃತ್ವದಲ್ಲಿ ಪ್ರತಿಭಟನೆ



ಕಡಬ ತಾಲೂಕು ರಚನೆ ಆಗಿ 2018ರಲ್ಲಿ ಮಂಜೂರಾತಿ ಆಗಿದ್ದು ಮಿನಿ ವಿಧಾನ ಸೌಧದ ಕಟ್ಟಡ ಪೂರ್ತಿಯಾಗಿದೆ. ಆದರೆ ತಾಲೂಕು ಕಚೇರಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು ಉಳಿದ 18 ಕಚೇರಿಗಳು ಇನ್ನೂ ಕಾರ್ಯವೆಸಗದೇ ಇರುವುದರಿಂದ ಕಡಬ ತಾಲೂಕಿನ ಜನತೆ ತೀವ್ರ ತೊಂದರೆಗೆ ಸಿಲುಕಿದ್ದಾರೆ. ಈಗಾಗಲೇ ಅನೇಕ ಮನವಿಗಳನ್ನು ನೀಡಿದ್ದರೂ ಅದಕ್ಕೆ ಸೂಕ್ತ ಸ್ಪಂದನೆ ಸಿಕ್ಕಿಲ್ಲ, ಇದು ನಮ್ಮ ಕೊನೆಯ ಮನವಿಯಾಗಿದ್ದು ಇದಕ್ಕೂ ಸ್ಪಂದನೆ ಸಿಗದೇ ಇದ್ದಲ್ಲಿ ಮುಂದಕ್ಕೆ ಉಗ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕಡಬ ತಾಲೂಕು ಹೋರಾಟ ಸಮಿತಿಯ ಸಂಚಾಲಕರಾದ ಸಯ್ಯದ್ ಮೀರಾ ಸಾಹೇಬ್ ಎಚ್ಚರಿಕೆ ನೀಡಿದ್ದಾರೆ.

ಕಡಬ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ಕಡಬ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಜು.11ರಂದು ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು

ಕಡಬದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಇದ್ದರೂ ಡಯಾಲಿಸಿಸ್ ಹಾಗೂ ವೈದ್ಯರ ಕೊರತೆ ಇದೆ, ಕಡಬದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಇಲ್ಲ, ಸ್ಥಳಾವಕಾಶ ಇದ್ದರೂ ಸಬ್ ರಿಜಿಸ್ಟಾರ್ ಕಚೇರಿ ತೆರೆದಿರುವುದಿಲ್ಲ, ಸಮಾಜ ಕಲ್ಯಾಣ ಇಲಾಖೆ, ಕೃಷಿ ತೋಟಗಾರಿಕೆ, ಪಶು ವೈದ್ಯಕೀಯ, ಅರಣ್ಯ, ಲೋಕೋಪಯೋಗಿ ಇಲಾಖೆ, ಅಲ್ಪಸಂಖ್ಯಾತ, ಹಿಂದುಳಿದ, ಮಹಿಳಾ ಮಕ್ಕಳ ಇಲಾಖೆ, ಅಧಿಕಾರಿಗಳು ಕಾರ್ಯ ನಿರ್ವಹಿಸುವುದಿಲ್ಲ, ಸಾರ್ವಜನಿಕ ಬಸ್‌ಸ್ಟ್ಯಾಂಡ್ ಇಲ್ಲ, ಇಂದಿರಾ ಕ್ಯಾಂಟೀನ್ ಇಲ್ಲ, ಅಗ್ನಿ ಶಾಮಕ ದಳಕ್ಕೆ ಸ್ಥಳ ಕಾಯ್ದಿರಿಸಿದರೂ ಕಾರ್ಯ ನಿರ್ವಹಿಸಲು ಕ್ರಮ ವಹಿಸಿಲ್ಲ, ಅಪ್‌ಗ್ರೇಡ್ ಕಾಲೇಜು ಸ್ಥಾಪನೆ ಆಗಿಲ್ಲ, ಐಟಿಐ, ಪಾಲಿಟೆಕ್ನಿಕ್ ಮುಂತಾದ ವಿದ್ಯಾಭ್ಯಾಸಕ್ಕೂ ಅವಕಾಶವಿಲ್ಲ ಎಂದು ಅವರು ಹೇಳಿದರು.

ಕಡಬದಲ್ಲಿ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಕಚೇರಿ ತೆರೆಯಬೇಕು, ನೆಲ್ಯಾಡಿ ಮತ್ತು ಕಾಣಿಯೂರಲ್ಲಿ ಪೊಲೀಸ್ ಠಾಣೆ ತೆರೆಯಬೇಕು ಎಂದು ಆಗ್ರಹಿಸಿದ ಅವರು ಕಡಬ ತಾಲೂಕಿನಲ್ಲಿ ಅಕ್ರಮ ಸಕ್ರಮ ಮನೆ ನಿವೇಶನ ಹಾಗೂ ಕುಟುಂಬದ ಆಸ್ತಿ ಪಾಲು ಪಟ್ಟಿ ಹಲವಾರು ವರ್ಷ ಕಳೆದರೂ ಕೂಡಾ ಸರ್ವೇ ಪ್ಲಾಟಿಂಗ್ ಆಗುತ್ತಿಲ್ಲ, ಇವೆಲ್ಲದರ ಬಗ್ಗೆ ಸರಕಾರ ಕೂಡಲೇ ಗಮನಹರಿಸಿ ಸೂಕ್ತ ಕ್ರಮ ವಹಿಸಬೇಕು ಎಂದು ಅವರು ಆಗ್ರಹಿಸಿದರು.

ನಮ್ಮ ಹಲವು ವರ್ಷಗಳ ಬೇಡಿಕೆಯ ಫಲವಾಗಿ ಸುಮಾರು 42 ಗ್ರಾಮಗಳನ್ನೊಳಗೊಂಡ ಕಡಬ ತಾಲೂಕು ಮಂಜೂರಾಗಿ 5ವರ್ಷವಾದರೂ ಮಿನಿ ವಿಧಾನ ಸೌಧದ ಕಟ್ಟಡ ಪೂರ್ತಿಯಾಗಿ ತಾಲೂಕು ಕಚೇರಿ ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ಈ ವರೆಗೆ ತಾಲೂಕು ಮಟ್ಟದ ವಿವಿಧ ಇಲಾಖಾ ಕಚೇರಿಗಳು ಪ್ರಾರಂಭಗೊಂಡಿಲ್ಲ. ಅಂದಾಜು 5 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಕಡಬ ತಾಲೂಕು ಪಂಚಾಯತ್‌ನಲ್ಲೂ ಹಲವು ಕಚೇರಿಗಳು ಖಾಲಿ ಇದೆ. ಮುಂದಕ್ಕೂ ಇದೇ ಪರಿಸ್ಥಿತಿ ಮುಂದುವರಿದಲ್ಲಿ ಅನಿವಾರ್ಯವಾಗಿ ಧರಣಿ, ಮುಷ್ಕರ, ಬಂದ್ ಮಾಡಲು ನಾವು ಹಿಂಜರಿಯುವುದಿಲ್ಲ ಎಂದು ಮೀರಾ ಸಾಹೇಬ್ ಹೇಳಿದರು.

ಪ್ರತಿಭಟನೆಯಲ್ಲಿ ಹಲವಾರು ಮಂದಿ ಭಾಗವಹಿಸಿದ್ದರು. ಪ್ರತಿಭಟನೆ ಬಳಿಕ ಬಳಿಕ ಉಪತಹಸಿಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು

Leave a Reply

Your email address will not be published. Required fields are marked *

error: Content is protected !!