ಭ್ರಷ್ಟಾಚಾರ ಮಾಡಿಲ್ಲ ಎಂದು ಮಾರಿಗುಡಿಯಲ್ಲಿ ಪ್ರಮಾಣ ಮಾಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ‘ತಾನು ಭ್ರಷ್ಟಾಚಾರ ಮಾಡಿಲ್ಲ’ ಎಂದು ಬೆಳ್ತಂಗಡಿಯ ಮಾರಿಗುಡಿಯಲ್ಲಿ ಪ್ರಮಾಣ ಮಾಡಿದ್ದಾರೆ
ನಾನು ಭ್ರಷ್ಟಾಚಾರ ಮಾಡಿಲ್ಲ, ಒಂದು ರೂಪಾಯಿ ಮುಟ್ಟಿಲ್ಲ, ಒಂದು ವೇಳೆ ತಪ್ಪು ಮಾಡಿದ್ದರೆ ತಕ್ಕ ಶಿಕ್ಷೆಯನ್ನು ಮಾರಿಗುಡಿಯ ಮಹಾದೇವಿ ನೀಡಲಿ” ಎಂದು ಅವರು ಪ್ರಮಾಣ ಮಾಡಿದ್ದಾರೆ.
ಹರೀಶ್ ಪೂಂಜಾ ವಿರುದ್ಧ ಐ.ಬಿ ಕಾಮಗಾರಿಯಲ್ಲಿನ ಭ್ರಷ್ಠಾಚಾರ, ರಾಷ್ಟ್ರೀಯ ಹೆದ್ದಾರಿಯ ಗುತ್ತಿಗೆದಾರರಿಂದ ಕಿಕ್ ಬ್ಯಾಕ್ ಸೇರಿದಂತೆ ಹಲವು ಆರೋಪಗಳನ್ನು ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂ ಶಾಸಕರ ಮಾಡಿದ್ದರು. ಇದಕ್ಕೆ ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ್ದ ಶಾಸಕ ಪೂಂಜಾ, “ಈ ಆರೋಪಗಳೆಲ್ಲ ಸುಳ್ಳು, ತಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಈ ಬಗ್ಗೆ ಮಾರಿಗುಡಿಯಲ್ಲಿ ಪ್ರಮಾಣ ಮಾಡುತ್ತೇನೆ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗಲಿ” ಎಂದಿದ್ದರು.
ಅದರಂತೆ ಆ.14ರಂದು ಬೆಳಗ್ಗೆ ಶಾಸಕ ಹರೀಶ್ ಪೂಂಜಾ ಮಾರಿಗುಡಿಯಲ್ಲಿ ಪ್ರಮಾಣ ಮಾಡಿ, “ಭ್ರಷ್ಟಾಚಾರ ನಡೆಸಿಲ್ಲ, ಒಂದು ರೂಪಾಯಿ ಯಾರಿಂದಲೂ ಪಡೆದಿಲ್ಲ, ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಈ ರೀತಿಯ ಸುಳ್ಳು ಆರೋಪಗಳನ್ನು ಮಾಡುತ್ತಿರುವ ರಕ್ಷಿತ್ ಶಿವರಾಂ ಸೇರಿದಂತೆ ಎಲ್ಲರಿಗೂ ತಕ್ಕ ಶಿಕ್ಷೆ ಬೆಳ್ತಂಗಡಿಯ ಮಾರಿಗುಡಿಯ ಮಹಾದೇವಿ ನೀಡಲಿ. ಒಂದು ವೇಳೆ ಅವರು ಆರೋಪಿಸಿದಂತೆ ನಾನು ತಪ್ಪು ಮಾಡಿದ್ದರೆ ನನ್ನನ್ನೂ ಶಿಕ್ಷಿಸಲಿ” ಎಂದು ಪ್ರಾರ್ಥಿಸಿದರು.
ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್ ಧರ್ಮಸ್ಥಳ, ಜಯಾನಂದ ಗೌಡ ಪ್ರಶಾಂತ್ ಪಾರೆಂಕಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.