ಭಾರೀ ಮಳೆಗೆ ಕುಂಬ್ರದ 60 ವರ್ಷ ಹಳೆಯ ಬಾವಿ ಕುಸಿತ
ಪುತ್ತೂರು: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕುಂಬ್ರದ ನೂತನ ಪಂಚಾಯತ್ ಕಟ್ಟಡದ ಬಳಿ ಇದ್ದ ಸುಮಾರು 60 ವರ್ಷ ಹಳೆಯ ಬಾವಿ ಸಂಪೂರ್ಣ ಕುಸಿತಗೊಂಡಿದೆ.

ಸಾರ್ವಜನಿಕರಿಗೆ ಕುಡಿಯುವ ನೀರಿಗಾಗಿ ತೋಡಿದ್ದ ಈ ಬಾವಿಯು ಒಂದು ಕಾಲದಲ್ಲಿ ಬಹಳಷ್ಟು ಮನೆಯವರು ಇದರಿಂದ ನೀರು ತೆಗೆಯುತ್ತಿದ್ದರು. ಇತ್ತೀಚೆಗೆ ಒಳಮೊಗ್ರು ಗ್ರಾಮ ಪಂಚಾಯತ್‌ನ ನೂತನ ಕಟ್ಟಡ ನಿರ್ಮಾಣದ ವೇಳೆ ಈ ಬಾವಿಯನ್ನು ನವೀಕರಣಗೊಳಿಸಿದ್ದರು. ಇದೀಗ ಬಾವಿಯು ಸಂಪೂರ್ಣ ಭೂಮಿಯೊಳಗೆ ಕುಸಿತಗೊಂಡಿದೆ.

ಈ ಬಾವಿಯ ಪಕ್ಕದಲ್ಲೇ ವಿದ್ಯುತ್ ಕಂಬ ಇದ್ದು ಕಂಬದ ಬದಿಯ ತನಕ ಬಾವಿ ಕುಸಿತಗೊಂಡಿದೆ. ಇನ್ನಷ್ಟು ಭೂ ಕುಸಿತ ಆಗುವ ಸಂಭವವಿದ್ದು ಇದರಿಂದ ವಿದ್ಯುತ್ ಕಂಬಕ್ಕೆ ಹಾನಿಯಾಗುವ ಅಪಾಯವಿದೆ. ಪಕ್ಕದಲ್ಲೇ ಕರ್ನಾಟಕ ಪಬ್ಲಿಕ್ ಸ್ಕೂಲ್ ಇದ್ದು ಇದೇ ರಸ್ತೆಯಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಓಡಾಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಮುಂದೆ ಸಂಭವಿಸುವ ಅಪಾಯವನ್ನು ತಪ್ಪಿಸುವಂತೆ ಸಾರ್ವಜನಕರು ಆಗ್ರಹಿಸಿದ್ದಾರೆ.