ಕರಾವಳಿ

ಪುತ್ತೂರು ಪ್ರಕಾಶ್ ಫೂಟ್ ವೇರ್’ನಿಂದ 15 ಲಕ್ಷ ರೂ ಕಳ್ಳತನ ನಡೆಸಿದ್ಧ ಆರೋಪಿಗಳಿಬ್ಬರ ಬಂಧನ



ಪುತ್ತೂರು: ಕಳೆದ 8 ತಿಂಗಳ ಹಿಂದೆ ಪುತ್ತೂರು ಮುಖ್ಯರಸ್ತೆಯ ಮೊಹಮ್ಮದ್ ಶಮೀರ್ ಮಾಲಕತ್ವದ ಪ್ರಕಾಶ್ ಫೂಟ್‌ವೇರ್ ಅಂಗಡಿಯಿಂದ ಸುಮಾರು 15 ಲಕ್ಷ ರೂ. ನಗದು ಕಳವು ಮಾಡಿ ಸಿಸಿ ಕ್ಯಾಮರಾ ಡಿವಿಆರ್‌ನ್ನೂ ಹೊತ್ತೊಯ್ದ ಘಟನೆಗೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪುತ್ತೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದಾವಣಗೆರೆ ದೇವಾನಗಿರಿ ದೇವರಾಜು ಅರಸು ಬಡಾವಣೆಯ ಸಮೀರ್ ಯಾನೆ ಕಪ್ಪ(22.ವ) ಮತ್ತು ಹಾಸನ ಸಕಲೇಶಪುರದ ಶಂಕರಿಪು ನಿವಾಸಿ ಚಂದ್ರಶೇಖರ್ ಯಾನೆ ಚಂದು(24.ವ) ಬಂಧಿತ ಆರೋಪಿಗಳು.
ಆರೋಪಿಗಳನ್ನು ಮೇ 29ರಂದು ಪುತ್ತೂರು ನೆಲ್ಲಿಕಟ್ಟೆ ಬಳಿ ಬಂಧಿಸಲಾಗಿತ್ತು. ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಎರಡು ದಿನ ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ಆರೋಪಿಗಳ ವಿಚಾರಣೆ ನಡೆಸಲಾಗಿದ್ದು ಕಳವು ಮಾಡಿದ್ದ ಹಣದಲ್ಲಿ ರೆಫ್ರಿಜರೇಟರ್, ಪೀಟೋಪಕರಣ ಸೇರಿದಂತೆ ಐಷಾರಾಮಿ ವಸ್ತುಗಳನ್ನು ಖರೀದಿಸಿದ್ದನ್ನು ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.

ಬಳಿಕ ಆರೋಪಿಗಳ ಮನೆಗೆ ತೆರಳಿ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.ಪೊಲೀಸ್ ಕಸ್ಟಡಿ ಅವಧಿ ಮುಗಿದ ಬಳಿಕ ಜೂ.1ರಂದು ಆರೋಪಿಗಳನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

2022ನೇ ಸೆ.15ರಂದು ಪ್ರಕಾಶ್ -ಫೂಟ್‌ವೇರ್ ಅಂಗಡಿಯ ಛಾವಣಿಯ ಹೆಂಚು ತೆಗೆದು ಒಳ ನುಗ್ಗಿದ ಕಳ್ಳರು ಅಂಗಡಿಯಲ್ಲಿ ಡ್ರಾವರ್‌ನಲ್ಲಿದ್ದ ಚಪ್ಪಲಿ ವ್ಯಾಪಾರದ ರೂ. 24,500 ನಗದು ಮತ್ತು ಇನ್ನೊಂದು ಡ್ರಾವರ್‌ನಲ್ಲಿದ್ದ ರೂ.14.50 ಲಕ್ಷ ನಗದು ಹಣವನ್ನು ಮತ್ತು ರೂ.10 ಸಾವಿರ ಮೌಲ್ಯದ ಸಿಸಿ ಕ್ಯಾಮರಾದ ಡಿವಿಅರ್‌ನ್ನು ಕಳವು ಮಾಡಿದ್ದರು.
ಪ್ರಕಾಶ್ ಫೂಟ್‌ವೇರ್ ನ ಮಾಲಕ ಮೊಹಮ್ಮದ್ ಶಮೀರ್ ಅವರು ಬೆಂಗಳೂರಿನಿಂದ ಹಳೆಯ ಕಾರುಗಳನ್ನು ಖರೀದಿಸಿ ತಂದು ಪುತ್ತೂರಿನಲ್ಲಿ ಮಾರಾಟ ಮಾಡುವ ವ್ಯವಹಾರ ನಡೆಸುತ್ತಿದ್ದು ಅವರು ಸೆ.15ರಂದು ತನ್ನಲ್ಲಿದ್ದ ರೂ.8 ಲಕ್ಷ ನಗದು ಮತ್ತು ಸ್ನೇಹಿತ ಸಿದ್ದಿಕ್ ಅವರು ನೀಡಿದ್ದ ರೂ.7 ಲಕ್ಷ ನಗದನ್ನು ಒಟ್ಟು ಸೇರಿಸಿ ಚಪ್ಪಲಿ ವ್ಯಾಪಾರ ಮಾಡುತ್ತಿರುವ ಅಂಗಡಿಯ ಕ್ಯಾಶ್ ಡ್ರಾವರ್ ಹಿಂಬದಿಯ ಇನ್ನೊಂದು ಮರದ ಬಾಕ್ಸ್ನಲ್ಲಿ ಇಟ್ಟಿದ್ದರು.

ಅಂಗಡಿಯನ್ನು ನೋಡಿಕೊಳ್ಳುತ್ತಿದ್ದ ತಾಜುದ್ದೀನ್ ಎಂಬವರು ಸೆ.16ರಂದು ಬೆಳಿಗ್ಗೆ ಅಂಗಡಿಯನ್ನು ತೆರೆದಾಗ ಅಂಗಡಿಯ ಡ್ರಾವರ್‌ನಲ್ಲಿದ್ದ ರೂ.24,500 ಮತ್ತು ಮರದ ಬಾಕ್ಸ್ನಲ್ಲಿಟ್ಟಿದ್ದ ರೂ.14.50 ಲಕ್ಷ ಮತ್ತು ರೂ.10 ಸಾವಿರ ಮೌಲ್ಯದ ಸಿಸಿ ಕ್ಯಾಮರಾದ ಡಿವಿಆರ್ ಕಳವಾಗಿರುವುದು ಬೆಳಕಿಗೆ ಬಂದಿತ್ತು.ಘಟನೆಗೆ ಸಂಬಂಧಿಸಿ ಮೊಹಮ್ಮದ್ ಶಮೀರ್ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದರು.ಆರಂಭದಲ್ಲಿ ಕಳವು ಪ್ರಕರಣಕ್ಕೆ ಸಂಬಂಧಿಸಿ ಶ್ವಾನದಳದಿಂದ ಕಳ್ಳರ ಜಾಡು ಹಿಡಿಯುವ ಪ್ರಯತ್ನ ನಡೆಸಲಾಗಿತ್ತು.ಶ್ವಾನ ತುಸುದೂರ ತನಕ ತೆರಳಿ ನಿಂತಿತ್ತು.ಬೆರಳಚ್ಚು ತಜ್ಞರು ಅಂಗಡಿಯಲ್ಲಿ ಕೆಲವೊಂದು ಪ್ರಮುಖ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದರು.

ಆರೋಪಿಗಳು ಮೇ 29ಕ್ಕೆ ಪುತ್ತೂರಿಗೆ ಬರುತ್ತಿದ್ದ ವೇಳೆ ಗಸ್ತು ನಿರತ ಪೊಲೀಸರು ಅನುಮಾನದೊಂದಿಗೆ ವಿಚಾರಿಸಿದಾಗ ಕಳವು ಮಾಡಿರುವ ಕುರಿತು ಬಾಯ್ಬಿಟ್ಟರು.ಈ ವೇಳೆ ಪೊಲೀಸರು ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಎರಡು ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದ ಪೊಲೀಸರು ವಿಚಾರಣೆ ನಡಸಿದ್ದರು.

Leave a Reply

Your email address will not be published. Required fields are marked *

error: Content is protected !!