ಕರಾವಳಿರಾಜ್ಯ

ಅಲ್ಲಿಬ್ಬರು ತಾಯಂದಿರೂ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ..ಗಮನಿಸಿ



✍️ಹೈದರ್ ಆಲಿ ಐವತ್ತೊಕ್ಲು, ಸಾಹಿತಿ

ಕಳೆದ ವರ್ಷ ಜಿಲ್ಲೆಯಲ್ಲಿ ನಡೆಯಬಾರದ ಖಂಡನೀಯ, ವೇದನೀಯ ಘಟನೆಗಳು ನಡೆದವು. ಮತಾಂಧತೆಗೆ ಬಾಳಿ ಬದುಕಬೇಕಾದ,ಕುಟುಂಬದ ಆಸರೆಯಾಗಿದ್ದ ನಾಲ್ಕು ಜೀವಗಳು ಮರೆಯಾದವು.

ಅದರಲ್ಲಿ ಬೆಳ್ಳಾರೆಯ ಪ್ರವೀಣ್ ನೆಟ್ಟಾರ್ ರವರ ಕೊಲೆಗೆ ಮುಖ್ಯಮಂತ್ರಿ, ಗೃಹಮಂತ್ರಿಯಾದಿಯಾಗಿ ರಾಜ್ಯ ಸರಕಾರವೇ ಬೆಳ್ಳಾರೆಗೆ ಬಂದಿತ್ತು .
ಭರಪೂರ ಪರಿಹಾರಗಳು, ಅವರ ಮಡದಿಗೆ ಸರಕಾರಿ ನೌಕರಿ,ಇರಲು ಭವ್ಯ ಮನೆ, ಕೊಲೆ ತನಿಖೆಗೆ NIA ನೇಮಕ, ಹಲವಾರು ಮಂದಿಯ ಬಂಧನ, ಹೀಗೆ…

ಆದರೆ ಅನತಿ ದೂರದಲ್ಲಿ ಮಾದಕ ದ್ರವ್ಯ ಮತ್ತು ಮತಾಂಧತೆಯ ನಶೆಯಿಂದ ನಡೆದ ಮಸೂದ್ ಎಂಬ ಅಮಾಯಕ ಯುವಕನ ಕೊಲೆ, ಸುರತ್ಕಲ್ ನಲ್ಲಿ ಫಾಝಿಲ್ ಎಂಬ ಸಮಾಜಸೇವಕ ಯುವಕನ ಹತ್ಯೆ, ನಂತರದ ದಿನಗಳಲ್ಲಿ ಕೃಷ್ಣಾಪುರದಲ್ಲಿ ಜಲೀಲ್ ಎಂಬವರ ಕೊಲೆ…! ಮೂವರು ಯುವಕರ ಕೊಲೆಗೆ ಸರಕಾರದಿಂದ ಯಾವುದೇ ಪರಿಹಾರಗಳಿಲ್ಲ, ಕನಿಷ್ಠ ಸಂತಾಪವಿಲ್ಲ, ಸರಕಾರದಿಂದ ಸ್ಪಷ್ಟ ತಾರತಮ್ಯತೆ.

ಪ್ರವೀಣರ ಪತ್ನಿಗೆ ಉದ್ಯೋಗ ಮತ್ತೆ ನೀಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಖಚಿತಪಡಿಸಿದ್ದಾರೆ.. ಸರಿ, ಇದಕ್ಕೆ ಅಭ್ಯಂತರ ಇಲ್ಲ, ಆದರೆ ಕೇವಲ ಮುಸ್ಲಿಮರು ಎಂಬ ಒಂದೇ ಕಾರಣಕ್ಕೆ ವಿನಾ ಕಾರಣ ಅಮಾನುಷವಾಗಿ ಕೊಲೆಗೈಯ್ಯಲ್ಪಟ್ಟ ಮುಸ್ಲಿಂ ಯುವಕರ ತಾಯಂದಿರೂ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ನಿರಪರಾಧಿಗಳಾದ ಅನೇಕ ಯುವಕರ ಬಂಧನವಾಗಿದೆ. ಅವರ ಮನೆಯವರು ದುಃಖದಲ್ಲಿದ್ದಾರೆ, ಆತಂಕದಲ್ಲಿದ್ದಾರೆ. ಹತ್ಯೆಗೈಯ್ಯಲ್ಪಟ್ಟ ಯುವಕರ ಮನೆಯವರಿಗೂ ಪರಿಹಾರ, ಉದ್ಯೋಗಗಳು ದೊರೆಯಬೇಕು, ಕೊಲೆಯ ನಿಷ್ಪಕ್ಷಪಾತ ತನಿಖೆಯಾಗಬೇಕು. ಕೊಲೆಗಡುಕರಿಗೆ ಶಿಕ್ಷೆಯಾಗಬೇಕು.ನಿರಪರಾಧಿಗಳ ಬಿಡುಗಡೆಯಾಗಬೇಕು.

“ಹೊಸ ಸರಕಾರ ನೀತಿ ಪಾಲಿಸಲಿ,ನ್ಯಾಯ ಒದಗಿಸಲಿ. ರಾಜಧರ್ಮ ಎತ್ತಿ ಹಿಡಿಯಲಿ..ನಾಡಿನಲ್ಲಿ ಶಾಂತಿ ನೆಲೆಸಲಿ.”
__________________
✍️ಹೈದರ್ ಆಲಿ ಐವತ್ತೊಕ್ಲು, ಸಾಹಿತಿ

Leave a Reply

Your email address will not be published. Required fields are marked *

error: Content is protected !!