ಸುಳ್ಯ: ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ-ಭವ್ಯ ನರಸಿಂಹಮೂರ್ತಿ ಕರೆ
ಸುಳ್ಯ: ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ತಮ್ಮೆಲ್ಲರ ಅಮೂಲ್ಯವಾದ ಮತವನ್ನು ನೀಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಕಾಂಗ್ರೆಸ್ ವಕ್ತಾರರು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ಪ್ರಧಾನ ಕಾರ್ಯದರ್ಶಿ ಭವ್ಯ ನರಸಿಂಹಮೂರ್ತಿ ಇಂದು ಸುಳ್ಯದಲ್ಲಿ ಕರೆ ನೀಡಿದ್ದಾರೆ.

ಸುಳ್ಯದಲ್ಲಿ ಇಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಿ ಕೃಷ್ಣಪ್ಪರವರ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಟೌನ್ ಹಾಲ್ ಬಳಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಈಗಾಗಲೇ ಘೋಷಣೆ ಮಾಡಿರುವಂತಹ ನಾಲ್ಕು ಗ್ಯಾರಂಟಿ ಯೋಜನೆಗಳು ಮಹಿಳೆಯರ ಮತ್ತು ಮಕ್ಕಳ ರಕ್ಷಣೆ,ಸ್ವಾವಲಂಬಿ ಬದುಕಿಗೆ, ಬಡತನ ನಿರ್ಮೂಲನೆಗೆ ಉತ್ತಮ ಕೊಡುಗೆಯಾಗಿದೆ.
ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಬುದ್ದಿವಂತ ಜನತೆಯನ್ನು ಹೊಂದಿರುವಂತಹ ದಕ್ಷಿಣ ಕನ್ನಡ ಜಿಲ್ಲೆಯ ಬಹು ವರ್ಷಗಳ ವಿಜಯ ಬ್ಯಾಂಕ್ ಅನ್ನು ಉತ್ತರ ಭಾರತದ ಬ್ಯಾಂಕಿಗೆ ಜೋಡಣೆ ಮಾಡುವಂತಹ ಕೆಲಸಗಳನ್ನು ಮಾಡಿದಲ್ಲದೆ,ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಏರ್ಪೋಟಿಗೆ ಕೋಟಿ ಚೆನ್ನಯ್ಯರ ಹೆಸರನ್ನು ಇಡುವ ಬದಲು ಅದಾನಿಯ ಹೆಸರನ್ನು ಇಡುವ ಮೂಲಕ ಜಿಲ್ಲೆಗೆ ಅನ್ಯಾಯವನ್ನು ಮಾಡಿರುವಂತಹ ಪಕ್ಷವಾಗಿದೆ. ಸಿದ್ದರಾಮಯ್ಯ ಸರ್ಕಾರದಿಂದ ನೀಡಿದಂತಹ ಅನ್ನ ಭಾಗ್ಯಕ್ಕೆ ಕನ್ನ ಹಾಕಿ,ಇಂದಿರಾ ಕ್ಯಾಂಟೀನ್ ಗಳನ್ನು ಇಲ್ಲದಾಗಿ ಮಾಡಿ ಬಡವರ ಹೊಟ್ಟೆಗೆ ಅನ್ನ ಸಿಗದಂತೆ ಮಾಡಿರುವ ಕೀರ್ತಿಗಳನ್ನು ಪಡೆದವರಾಗಿದ್ದಾರೆ.ಅವರ ಅಧಿಕಾರ ಅವಧಿಯಲ್ಲಿ ಯಾವುದೇ ಉತ್ತಮವಾದ ಯೋಜನೆಗಳನ್ನು ತಂದವರಲ್ಲ. ಅಂತಹ ಪಕ್ಷದ ಮೇಲೆ ಸೇಡು ತೀರಿಸುವಂತಹ ಕಾಲ ಈ ಚುನಾವಣೆ ಕಾಲವಾಗಿದ್ದು,ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯವರು ಬಿಜೆಪಿಗೆ ತಕ್ಕ ಉತ್ತರವನ್ನು ನೀಡಬೇಕೆಂದು ಅವರು ಹೇಳಿದರು.

ಬಳಿಕ ಮಾತನಾಡಿದ ಮಾಜಿ ಸಚಿವ ಯುಟಿ ಖಾದರ್ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಹೆಚ್ಚಿನ ಸ್ಥಾನವನ್ನು ಪಡೆಯಬೇಕಾದರೆ ಸುಳ್ಯದ ಅಭ್ಯರ್ಥಿ ಜಿ ಕೃಷ್ಣಪ್ಪರವರ ಗೆಲುವು ಅತಿ ಅವಶ್ಯಕವಾಗಿದೆ. ಪಕ್ಷದ ಅಭ್ಯರ್ಥಿಗಳ ಬಗ್ಗೆ ಯಾವುದೇ ಗೊಂದಲಗಳಿದ್ದರೂ ಕೂಡ ಅವುಗಳನ್ನು ಸರಿಪಡಿಸಿಕೊಂಡು ಪಕ್ಷವನ್ನು ನೋಡಿ ರಾಜ್ಯದ ಅಭಿವೃದ್ಧಿಯನ್ನು ಬಯಸಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕಾಗಿದೆ ಎಂದು ಅವರು ಹೇಳಿದರು. ಬಿಜೆಪಿಯ ದುರಾಡಳಿತದಿಂದ ಜನರು ಬೇಸತ್ತು ಹೋಗಿದ್ದು ಈ ಬಾರಿ ಜನತೆ ಬದಲಾವಣೆಯನ್ನು ಬಯಸುತ್ತಿರುವುದು ಎಲ್ಲಾ ಕಡೆ ಕಂಡು ಬರುತ್ತಿದೆ.ಆದ್ದರಿಂದ ಸ್ವಾಸ್ಥ ಸಮಾಜ ನಿರ್ಮಾಣಕ್ಕಾಗಿ ರಾಜ್ಯದ ಸಂಪೂರ್ಣ ಅಭಿವೃದ್ಧಿಗಾಗಿ ಎಲ್ಲರೂ ಕೈಜೋಡಿಸಿ ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ದುಡಿಯಬೇಕು ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಕಾರ್ಯಕ್ರಮ ನಿರೂಪಿಸಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿಸಿ ಜಯರಾಮ್ ಸಾಗತಿಸಿದರು.ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್,ಅಭ್ಯರ್ಥಿ ಜಿ ಕೃಷ್ಣಪ್ಪ,ಪಕ್ಷದ ಮುಖಂಡರುಗಳಾದ ಟಿ ಎಂ ಶಹೀದ್,ಎಂ ವೆಂಕಪ್ಪ ಗೌಡ, ಹಮೀದ್ ಕುತ್ತಮಟ್ಟೆ, ಎನ್ ಜಯಪ್ರಕಾಶ್ ರೈ,ಸದಾನಂದ ಮಾವಂಜಿ,ಕೆ ಎಮ್ ಮುಸ್ತಫಾ, ಮೊದಲಾದವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.