ಕರಾವಳಿರಾಜಕೀಯ

ನಂದಕುಮಾರ್ ‘ಕ್ಯಾರೆಕ್ಟರ್’ ಸರಿಯಿಲ್ಲ ಎಂದ ಅಡ್ಪಂಗಾಯ: ಹಿಗ್ಗಾ ಮುಗ್ಗಾ ತರಾಟೆಗೆತ್ತಿಕೊಂಡ ಕಾರ್ಯಕರ್ತರು



ಸುಳ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೊಂದಲ ನಿವಾರಿಸಲು ಮಾಜಿ ಸಚಿವ ರಮಾನಾಥ ರೈ ನೇತೃತ್ವದ ನಿಯೋಗ ಸುಳ್ಯ ಕಾಂಗ್ರೆಸ್ ಕಚೇರಿಯಲ್ಲಿ ಅಭಿಪ್ರಾಯ ಸಂಗ್ರಹ ಸಭೆ ನಡೆಸುತ್ತಿದ್ದ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯರು ನಂದಕುಮಾರ್ ರ ಕ್ಯಾರೆಕ್ಟರ್ ಸರಿ ಇಲ್ಲ. ಅಂತವರನ್ನು ಹೇಗೆ ಅಭ್ಯರ್ಥಿಯಾಗಿಸ್ತೀರಿ ? ಇಲ್ಲಿ ಕೂಗಾಡುವವರು ಎಲ್ಲರೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲ. ಇವರನ್ನೆಲ್ಲ ದುಡ್ಡು ಕೊಟ್ಟು ತರಿಸಲಾಗಿದೆ ಎಂದು ಹೇಳಿದ್ದು ಅದು ಸಭೆಯಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಯಿತು.

ಧನಂಜಯ ಅಡ್ಪಂಗಾಯರ ವಿರುದ್ಧ ಧಿಕ್ಕಾರ ಕೂಗಿದ ಕಾರ್ಯಕರ್ತರು ನಾಯಕರಿಂದಾಗಿ ಸುಳ್ಯ ಕ್ಷೇತ್ರ ಬಿಜೆಪಿ ಪಾಲಾಗುತ್ತಿದೆ ಎಂದು ಹೇಳಿದರು. ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿಯವರು ಅಡ್ಪಂಗಾಯ ಪರ ವಾಗಿ ಮಾತನಾಡಿದಾಗ ಕಾರ್ಯಕರ್ತರು ಭರತ್ ಮುಂಡೋಡಿ ವಿರುದ್ಧವೂ ಹರಿ ಹಾಯ್ದರು.

ಕಾರ್ಯಕರ್ತರ ಆಕ್ರೋಶ ಜೋರಾಗಿ ನಡೆಯುತ್ತಿದ್ದ ವೇಳೆ ನಾಯಕರು ಸಮಾಧಾನ ಮಾಡಲು ಯತ್ನಿಸಿದರಾದ್ರೂ ಕಾರ್ಯಕರ್ತರು ಆಕ್ರೋಶ ತನ್ನಗಾಗಲಿಲ್ಲ. ಕೆಲಹೊತ್ತು ಮಾತಿನ ಚಕಮಕಿ, ತಳ್ಳಾಟ, ವಾಕ್ಸಮರ ನಡೆಯಿತು.

ಗದ್ದಲ, ಗಲಾಟೆ ಮಧ್ಯದಿಂದ ನಾವು ಹೇಗೆ ತಪ್ಪಿಸಿ ಹೋಗಲಿ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸುಳ್ಯದಲ್ಲಿ 30 ವರ್ಷಗಳಲ್ಲಿ ಕಾಂಗ್ರೆಸ್ ನ್ನು ಸೋಲಿಸಿದ್ದು ಮೇಲ್ಸ್ತರದ ನಾಯಕರೇ ಹೊರತು ಇಲ್ಲಿನ ಕಾರ್ಯಕರ್ತರಲ್ಲ ಎಂದು ಹಲವರು ಹೇಳಿದರು. ಎಂ.ಎಲ್.ಸಿ. ಮಂಜುನಾಥ ಭಂಡಾರಿ, ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹಾಗೂ ನಂದಕುಮಾರ್ ರವರು ಕಾರ್ಯಕರ್ತರನ್ನು ಸಮಾಧಾನಗೊಳಿಸಲು ಪ್ರಯತ್ನಿಸಿದರು.

Leave a Reply

Your email address will not be published. Required fields are marked *

error: Content is protected !!