ಸುಳ್ಯ: ತೆಂಗಿನ ಮರದಿಂದ ಬಿದ್ದು ಇಬ್ಬರು ದಾರುಣ ಸಾವು
ಸುಳ್ಯ ತಾಲೂಕಿನ ನೆಲ್ಲೂರು ಕೇಮ್ರಾಜೆ ಗ್ರಾಮದಲ್ಲಿ ಒಂದು ದಿನದ ಅಂತರದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಯಲ್ಲಿ ಇಬ್ಬರು ತೆಂಗಿನ ಮರದಿಂದ ಬಿದ್ದು ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ತಾಲೂಕಿನ ಅಂಬೆಕಲ್ಲು ಬಳಿಯ ಪರ್ಲಡಿ ಎಂಬಲ್ಲಿ ತೆಂಗಿನ ಕಾಯಿ ಕೀಳಲು ತೆಂಗಿನ ಮರವೇರಿದ್ದ ನೆಲ್ಲೂರು ಕೇಮ್ರಾಜೆ ಗ್ರಾಮದ ದಾಸನಕಜೆ ನಿವಾಸಿ ಸತೀಶ ಮಣಿಯಾಣಿ (34.ವ) ಆಕಸ್ಮಿಕವಾಗಿ ತೆಂಗಿನ ಮರದಿಂದ ಬಿದ್ದು ಗಂಭೀರ ಗಾಯಗೊಂಡಿದ್ದು ಬಳಿಕ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಅವರು (ಎ.10ರಂದು) ಅವರು ಮೃತಪಟ್ಟಿದ್ದರು. ಮೃತರು ತಾಯಿ ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ.
ನೆಲ್ಲೂರು ಕೇರ್ಮಾಜೆ ಗ್ರಾಮದಲ್ಲೇ ಇನ್ನೊಂದು ಘಟನೆಯೂ ಸಂಭವಿಸಿದೆ. ಕೇಮ್ರಾಜೆ ಗ್ರಾಮದ ನಾರ್ಣಕಜೆ ನಿವಾಸಿ ಹರೀಶ್(28.ವ) ಅವರು ಬೊಳ್ಳಾಜೆ ಕಂದೂರು ಎಂಬಲ್ಲಿ ಎ.11ರಂದು ತೆಂಗಿನ ಕಾಯ ಕೀಳಲು ಮರವೇರಿ ತೆಂಗಿನಕಾಯಿ ತೆಗೆದು ಇಳಿಯುತ್ತಿದ್ದ ವೇಳೆ ತೆಂಗಿನ ಮರದಿಂದ ಬಿದ್ದು ಗಂಭೀರ ಗಾಯಗೊಂಡಿದ್ದರು. ಬಳಿಕ ಆಸ್ಪತ್ರೆಗೆ ದಾಖಲಿಸುವ ವೇಳೆ ಅವರು ಕೊನೆಯುಸಿರೆಳೆದಿದ್ದರು.
ಮೃತರು ತಾಯಿ, ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಒಂದೇ ಗ್ರಾಮದಲ್ಲಿ ದಿನಗಳ ಅಂತರದಲ್ಲಿ ಇಬ್ಬರು ತೆಂಗಿನ ಮರದಿಂದ ಬಿದ್ದು ಮೃತಪಟ್ಟಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.