ಕರಾವಳಿರಾಜಕೀಯ

ಸುಳ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಂದಕುಮಾರ್ ಕಣಕ್ಕೆ..! ಬೆಂಬಲಿಗರ ನಿರ್ಧಾರ



ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನು ಒಂದು ವಾರದಲ್ಲಿ ಬದಲಾವಣೆ ಮಾಡಿ ಹೆಚ್.ಎಂ.ನಂದಕುಮಾರ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿ ಬಿಫಾರಂ ನೀಡದಿದ್ದಲ್ಲಿ ಕಾರ್ಯಕರ್ತರ ಸ್ವಾಭಿಮಾನದ ಅಭ್ಯರ್ಥಿಯಾಗಿ ನಂದಕುಮಾರ್ ಅವರನ್ನು ಪಕ್ಷೇತರರಾಗಿ ಕಣಕ್ಕಿಳಿಸಲು ಸಿದ್ದರಿದ್ದೇವೆ ಎಂದು ಇಂದು ನಿಂತಿಕಲ್ಲಿನಲ್ಲಿ ನಡೆದ ನಂದಕುಮಾರ್ ಅಭಿಮಾನಿ ಬಳಗದ ಸಮಾವೇಶದಲ್ಲಿ ಅಭಿಮಾನಿ ಬಳಗದ ಆಗ್ರಹ ಕೇಳಿ ಬಂದಿದೆ.

ನಿಂತಿಕಲ್ಲು ಧರ್ಮಶ್ರೀ ಆರ್ಕೇಡ್ ನ ಲಕ್ಷ್ಮಿ ಶ್ರೀ ಸಭಾಭವನದಲ್ಲಿ ಇಂದು ನಡೆದ ಸಮಾವೇಶದಲ್ಲಿ ನಂದಕುಮಾರ್ ಅಭಿಮಾನಿ ಬಳಗದ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಕಡಬ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಬಳ್ಳೇರಿ ಸಮಾವೇಶದ ನಿರ್ಧಾರವನ್ನು ತಿಳಿಸಿದರು. ಈ ಸಂದರ್ಭದಲ್ಲಿ ನಂದಕುಮಾರ್ ಅವರು ಪಕ್ಷೇತರರಾಗಿ ಸ್ಪರ್ಧಿಸಬೇಕು ಎಂದು ಕಾರ್ಯಕರ್ತರು ಒಕ್ಕೊರಳಿನಿಂದ ಆಗ್ರಹಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಸಮಾವೇಶದಲ್ಲಿ ಮಾತನಾಡಿದ ಬಾಲಕೃಷ್ಣ ಬಳ್ಳೇರಿ ಇತ್ತೀಚಿಗೆ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ವಿದ್ಯಮಾನವನ್ನು ನಾಯಕರುಗಳು ಅರ್ಥ ಮಾಡಿಕೊಳ್ಳಬೇಕು. ಅಭ್ಯರ್ಥಿ ಆಯ್ಕೆಯನ್ನು ಪುನರ್ ಪರಿಶೀಲನೆ ಮಾಡಿ
ನಂದಕುಮಾರ್ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿ ಎಂಬುವುದೇ ನಮ್ಮ ಬೇಡಿಕೆಯಾಗಿದೆ. ಕಾಂಗ್ರೆಸ್ ಪಕ್ಷದ ವಿರುದ್ಧವಾಗಿ ನಾವು ಮಾತನಾಡುತ್ತಿಲ್ಲ. ಈ ಬಾರಿ ಆಯ್ಕೆ ಮಾಡಿರುವ ಅಭ್ಯರ್ಥಿಯನ್ನು ಮಾತ್ರ ಬದಲಿಸಬೇಕೆಂದು ಕೇಳಿಕೊಳ್ಳುತ್ತಿದ್ದೇವೆ.ಅದು ಪಕ್ಷದ ಗೆಲುವಿಗಾಗಿ ನಾವು ಆಗ್ರಹಿಸುತ್ತಿದ್ದೇವೆ ಎಂದು ಹೇಳಿದರು.

ಸಮಿತಿಯ ಮುಖಂಡ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು ಮಾತನಾಡಿ’ ಕಾಂಗ್ರೆಸ್‌ನಲ್ಲಿಯ ನಿಷ್ಮ್ರೀಯ ರಾಜಕೀಯಕ್ಕೆ ಮುಕ್ತಿ ಆಗಬೇಕು ಎಂಬ ಉದ್ದೇಶದಿಂದ, ನಂದಕುಮಾರ್ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗಬೇಕು ಎಂಬ ನೆಲೆಯಲ್ಲಿ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ತಾಲೂಕು ಪಂಚಾಯತ್ ಮಾಜಿ ಸದಸ್ಯ ಅಶೋಕ್ ನೆಕ್ರಾಜೆ ಮಾತನಾಡಿ ತನ್ನ ಸ್ವಂತ ಖರ್ಚಿನಿಂದ ಸಮಾಜಕ್ಕೆ ಸೇವೆ ಮಾಡಿದ ನಂದಕುಮಾರ್ ಅವರೇ ಸೂಕ್ತ ಅಭ್ಯರ್ಥಿಯಾಗಿದ್ದು ಅವರಿಗೆ ಅವಕಾಶ ಸಿಗಬೇಕೆಂದು ಆಗ್ರಹಿಸಿದರು.


ಸುಳ್ಯ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಗೋಕುಲ್‌ದಾಸ್ ಮಾತನಾಡಿ ‘ಕಾಂಗ್ರೆಸ್ ನಾಯಕರಿಂದಾಗಿ ಕಾರ್ಯಕರ್ತರು ಬಲಿಪಶುಗಳಾಗಿದ್ದಾರೆ. ಶಾಸಕರಿಲ್ಲದ ಕೊರಗು ಕಾರ್ಯಕರ್ತರಲ್ಲಿ ಇದೆ. ಸಮಾಜ ಸೇವೆ ಮಾಡುವವರಿಗೆ ಸಮಾಜದಲ್ಲಿ ಬೆಲೆ ಇದೆ. ವಿಧಾನಸಭಾ ಚುನಾವಣೆ ಮಾತ್ರವಲ್ಲ, ಜಿ.ಪಂ.ಹಾಗು ತಾ.ಪಂ.ಚುನಾವಣೆಯಲ್ಲಿಯೂ ಸಮರ್ಥರಿಗೆ ಸೀಟ್ ನೀಡಲು ಇದು ಮಾದರಿಯಾಗಬೇಕು ಎಂದರು.



ತಾ.ಪಂ.ಮಾಜಿ ಸದಸ್ಯೆ ಆಶಾ ಲಕ್ಷ್ಮಣ್ ಮಾತನಾಡಿ ‘ ಕಾರ್ಯಕರ್ತರ ಭಾವನೆಗೆ ಬೆಲೆ‌ ಕೊಡದ ಕಾರಣ ಕಾಂಗ್ರೆಸ್‌ಗೆ ಇದ್ದಂತಹಾ ಉತ್ತಮ ಅವಕಾಶ‌‌ ಕಳೆದುಕೊಳ್ಳಲಿದೆ. ನಂದಕುಮಾರ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದರೆ ಸುಳ್ಯಕ್ಕೆ ಕಾಂಗ್ರೆಸ್‌ ಎಂಎಲ್‌ಎ‌ ಖಚಿತ ಎಂದು ಹೇಳಿದರು.


ರೈತ ಸಂಘದ ತಾಲೂಕು ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿ ಮಾತನಾಡಿ ರೈತ ಸಂಘಕ್ಕೆ ಯಾವುದೇ ರಾಜಕೀಯ ಹಿತಾಸಕ್ತಿ ಇಲ್ಲಾ. ಆದರೆ‌ ಸುಳ್ಯದಲ್ಲಿ ಬದಲಾವಣೆ ಆಗಬೇಕು ಎಂಬ ಉದ್ದೇಶದಿಂದ ನಂದಕುಮಾರ್ ಚುನಾವಣಾ‌ ಕಣದಲ್ಲಿ ಇದ್ದರೆ ಅವರನ್ನು ರೈತ ಸಂಘ ಬೆಂಬಲಿಸಲಿದೆ ಎಂದು ಘೋಷಿಸಿದರು.



ಕಡಬ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಗಣೇಶ್ ಕೈಕುರೆ ಮಾತನಾಡಿ ‘ ಕಾಂಗ್ರೆಸ್ ಹೋರಾದ ಫಲವಾಗಿ ಭಾರತಕ್ಕೆ‌‌ ಸ್ವಾತಂತ್ರ್ಯ ಬಂದಿದೆ. ಆದರೆ ಕಾಂಗ್ರೆಸ್‌ನಲ್ಲಿ ನ್ಯಾಯಕ್ಕಾಗಿ ಹೋರಾಟ ಮಾಡಬೇಕಾಗಿ ಬಂದಿರುವುದು ದುರದೃಷ್ಟಕರ ಎಂದರು. ನಮಗೆ ನ್ಯಾಯ ಸಿಗುವ ತನಕ ಹೋರಾಟ ಮಾಡುತ್ತೇವೆ ಎಂದರು.


ಗ್ರಾ.ಪಂ.ಸದಸ್ಯೆ ಉಷಾ ಜಾಯ್, ಹಿರಿಯರಾದ ಬಾಲಕೃಷ್ಣ ಮರೀಲ್, ಅಬೂಬಕ್ಕರ್ ಅರಫ ಅಯ್ಯನಕಟ್ಟೆ, ಶಿವಣ್ಣ ಗೌಡ ಇಡ್ಯಾಡಿ ಮಾತನಾಡಿದರು. ಫೈಜಲ್ ಕಡಬ ಸ್ವಾಗತಿಸಿ, ಶಶಿಧರ ಎಂ.ಜೆ.ವಂದಿಸಿದರು. ಸಚಿನ್‌ರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಪ್ರಮುಖರಾದ ರವೀಂದ್ರ ಕುಮಾರ್ ರುದ್ರಪಾದ, ಸತ್ಯಕುಮಾರ್ ಆಡಿಂಜ, ಮುತ್ತಪ್ಪ ಪೂಜಾರಿ, ಸಿ.ಜೆ.ಸೈಮನ್, ವಿಜಯಕುಮಾರ್ ರೈ, ಉಷಾ ಅಂಚನ್, ಅನಿಲ್ ರೈ ಬೆಳ್ಳಾರೆ, ಜಗನ್ನಾಥ ಪೂಜಾರಿ ಪೆರುವಾಜೆ, ಭವಾನಿಶಂಕರ ಕಲ್ಮಡ್ಕ, ಚೇತನ್ ಕಜೆಗದ್ದೆ, ಲಕ್ಷ್ಮಣ್ ಬೊಳ್ಳಾಜೆ, ರಮೇಶ್ ಕೋಟೆ, ಲೋಕೇಶ್ ಅಕ್ರಿಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.


ಬೃಹತ್ ಸಮಾವೇಶದಲ್ಲಿ‌‌ ಒಂದೂವರೆ ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!