ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟರ್, ವಿಡಿಯೋ ಪ್ರಸಾರ ಮಾಡುವವರೇ ಹುಷಾರ್..! ಪೊಲೀಸ್ ಇಲಾಖೆಯಿಂದ ಖಡಕ್ ವಾರ್ನಿಂಗ್
ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನೀತಿ ಸಹಿತ ಜಾರಿಯಲ್ಲಿದ್ದು ಜಿಲ್ಲೆಯಾದ್ಯಂತ ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ನಿಗಾವನ್ನು ಇರಿಸಲಾಗಿದ್ದು ಈ ರೀತಿಯ ಪ್ರಕರಣಗಳು ಕಂಡು ಬಂದಲ್ಲಿ ಕೂಡಲೇ ಕಾನೂನು ಕ್ರಮ ವಹಿಸುವುದಾಗಿ ಪೊಲೀಸ್ ಇಲಾಖೆಯಿಂದ ಪತ್ರಿಕಾ ಪ್ರಕಟಣೆ ಮೂಲಕ ಎಚ್ಚರಿಕೆಯನ್ನು ನೀಡಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟರ್ ಗಳು ಅಥವಾ ವಿಡಿಯೋಗಳು, ಸಮಾಜದಲ್ಲಿ ಅಶಾಂತಿ ಉಂಟು ಮಾಡುವಂತಹ ಬರವಣಿಗೆಗಳು, ದ್ವೇಷ ಹರಡುವ ಸುದ್ದಿಗಳು, ಯಾವುದೇ ಅಶ್ಲೀಲ ಅಸಭ್ಯ ವಿಷಯಗಳನ್ನು ಒಳಗೊಂಡ ಪೋಸ್ಟರ್ ಗಳು, ಯಾವುದೇ ವ್ಯಕ್ತಿಗೆ ಸಂಬಂಧಿಸಿದಂತೆ ಚಾರಿತ್ರ್ಯ ಹರಣ, ಮಾನಹಾನಿ ಉಂಟಾಗುವಂತಹ ಪೋಸ್ಟರ್ಗಳು ಮುಂತಾದ ಘಟನೆಗಳು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗಿರುತ್ತದೆ ಎಂದು ತಿಳಿಸಲಾಗಿದೆ.
ಇವುಗಳ ಮೇಲೆ ನಿಗಾ ಇಡಲು ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾ ಅಧಿಕಾರಿಗಳ ಕಚೇರಿ, ಜಿಲ್ಲಾ ಪೊಲೀಸ್ ಕಚೇರಿ, ಬಂಟ್ವಾಳ, ಪುತ್ತೂರು ಪೊಲೀಸ್ ಉಪಾಧೀಕ್ಷಕರುಗಳ ಕಚೇರಿಗಳಲ್ಲಿ ಸಾಮಾಜಿಕ ಜಾಲತಾಣಗಳ ಮಾನಿಟರಿಂಗ್ ಸೆಲ್ ಇರಿಸಲಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುವ ಎಲ್ಲಾ ವಿಷಯಗಳನ್ನು ಪರಿಶೀಲಿಸಲಾಗುತ್ತಿದೆ.
ಆದ್ದರಿಂದ ಯಾರೂ ಕೂಡ ಈ ಕೃತ್ಯಗಳಿಗೆ ಭಾಗಿಯಾಗಬಾರದೆಂದು, ತಪ್ಪಿದ್ದಲ್ಲಿ ಶಿಕ್ಷೆಗೆ ಗುರಿಪಡಿಸಲಾಗುವುದೆಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.