ಪುತ್ತೂರಿನಲ್ಲಿ ಅಶೋಕ್ ರೈಗೆ ಟಿಕೆಟ್ ಪಕ್ಕಾ ಆಗುತ್ತಿದ್ದಂತೆ ಕುತೂಹಲಕ್ಕೆ ಕಾರಣವಾದ ಕೆಲ ಆಕಾಂಕ್ಷಿಗಳ ಮುಂದಿನ ನಡೆ
ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಅಶೋಕ್ ಕುಮಾರ್ ರೈಯವರಿಗೆ ಬಹುತೇಕ ಫೈನಲ್ ಆಗಿದ್ದು ಅಂತಿಮ ಮುದ್ರೆಯೊಂದೇ ಬಾಕಿಯಿದೆ ಎನ್ನಲಾಗುತ್ತಿದೆ. ಅಶೋಕ್ ರೈಗೆ ಟಿಕೆಟ್ ಪಕ್ಕಾ ಎನ್ನುವ ಸುದ್ದಿ ಹಬ್ಬುತ್ತಿದ್ದಂತೆ ಪುತ್ತೂರು ಕ್ಷೇತ್ರದಿಂದ ಸ್ಪರ್ಧೆ ಬಯಸಿ ಟಿಕೆಟ್ ಆಕಾಂಕ್ಷಿಗಳಾಗಿದ್ದ ಕೆಲವರಲ್ಲಿ ತಳಮಳ ಶುರು ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬಿಜೆಪಿಯಲ್ಲಿ ಕಳೆದ 20 ವರ್ಷಗಳಿಂದ ಜಿಲ್ಲಾ ಕಾರ್ಯಕಾರಿಣಿ ಸಮಿತಿಯಲ್ಲಿ ಸದಸ್ಯರಾಗಿ ಕೆಲಸ ಮಾಡಿದ್ದ ಕೋಡಿಂಬಾಡಿ ಅಶೋಕ್ ಕುಮಾರ್ ರೈ ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದರು. ಇವರು ಕಾಂಗ್ರೆಸ್ ಸೇರಿದ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಹೊಸ ಹವಾ ಸೃಷ್ಟಿಯಾಗಿತ್ತು. ಹಿಂದೆಂದೂ ಕಂಡರಿಯದ ರೀತಿಯಲ್ಲಿ ಕಳೆದ ಒಂದು ತಿಂಗಳಿನಿಂದ ಪಕ್ಷದ ಸಭೆಗಳು ಅಲ್ಲಲ್ಲಿ ನಡೆದಿದ್ದವು. ಈ ಎಲ್ಲಾ ಸಭೆಗಳಿಗೂ ಅಶೋಕ್ ಕುಮಾರ್ ರೈಯವರು ಭಾಗವಹಿಸುವ ಮೂಲಕ ಕಟ್ಟ ಕಡೆಯ ಕಾರ್ಯಕರ್ತನ ಮನೆ ಬಾಗಿಲನ್ನೂ ತಟ್ಟಿದ್ದರು.
ಕಾಂಗ್ರೆಸ್ ಸೇರ್ಪಡೆಯಾಗುವ ಸಂದರ್ಭದಲ್ಲಿ ಮಾತನಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಕ್ಷಕ್ಕೆ ಇಂದು ಸೇರಿದವನೂ ಹಿರಿಯರೇ, ಇವತ್ತು ಸೇರಿದವ, ಹಿಂದೆಯೇ ಇದ್ದವ ಎಂಬ ಬೇಧವಿಲ್ಲ. ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಎಷ್ಟೇ ಆಕಾಂಕ್ಷಿಗಳಿದ್ದರೂ ಹೈಕಮಾಂಡ್ ಯಾರಿಗೆ ಅವಕಾಶ ಕೊಡುತ್ತದೆಯೋ ಅದಕ್ಕೆ ಎಲ್ಲರೂ ಬದ್ದರಾಗಿರಬೇಕು ಎಂದು ಹೇಳಿದ್ದರು.
ಅಶೋಕ್ ಕುಮಾರ್ ರೈ ಪಕ್ಷಕ್ಕೆ ಸೇರಿದ ಬಳಿಕ ಅವರಿಗೇ ಟಿಕೆಟ್ ಸಿಗುತ್ತದೆ ಎಂಬ ಸುದ್ದಿ ಎಲ್ಲೆಡೆ ಹರಡಿತ್ತು. ಪ್ರತಿಯೊಬ್ಬ ಕಾರ್ಯಕರ್ತನೂ ‘ಈ ಸರ್ತಿ ಅಶೋಕೆರೆಗ್ ಸೀಟ್ ಆಪುಂಡಿಗೆ’ ಎಂಬ ಮಾತು ಎಲ್ಲೆಡೆ ಪ್ರಚಲಿತದಲ್ಲಿತ್ತು. ಈ ನಡುವೆ ಟಿಕೆಟ್ ಆಕಾಂಕ್ಷಿಗಳ ಪೈಕಿ ಕೆಲವರ ಬೆಂಬಲಿಗರು ಸೋಶಿಯಲ್ ಮೀಡಿಯಾದಲ್ಲಿ ‘ಇವರಿಗೆ ಈ ಬಾರಿ ಟಿಕೆಟ್ ಪಕ್ಕಾ, ಅವರಿಗೆ ಈ ಬಾರಿ ಸೀಟ್ ಪಕ್ಕಾ’ ಎಂಬ ಒಕ್ಕಣೆಯನ್ನು ಸೇರಿಸಿ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ತುಣುಕುಗಳನ್ನು ಹರಿಯಬಿಟ್ಟಿದ್ದರು. ಆದರೆ ಕಳೆದ ಎರಡು ದಿನಗಳಿಂದ ಅಶೋಕ್ ರೈಯವರಿಗೆ ಟಿಕೆಟ್ ಸಿಗುವುದು ಪಕ್ಕಾ ಆಗುತ್ತಿದ್ದಂತೆ ಪುತ್ತೂರು ಕಾಂಗ್ರೆಸ್ನಲ್ಲಿ ಕಾರ್ಯಕರ್ತರಲ್ಲಿ ಸಂತೋಷ ಉಂಟಾದರೆ ಕೆಲವು ನಾಯಕರಲ್ಲಿ ತಳಮಳ ಶುರುವಾಗಿದೆ.
ಈ ನಡುವೆ ಮಹಿಳಾ ಕಾಂಗ್ರೆಸ್ ಘಟಕ ಸುದ್ದಿಗೋಷ್ಠಿ ನಡೆಸಿ ಮಾಜಿ ಶಾಸಕಿಗೆ ತನ್ನ ಬೆಂಬಲವನ್ನು ಸೂಚಿಸಿತ್ತು. 14 ಮಂದಿ ಆಕಾಂಕ್ಷಿಗಳ ಪೈಕಿ ಯಾರಿಗೇ ಅವಕಾಶ ಸಿಕ್ಕಿದರೂ ನಾವೆಲ್ಲರೂ ಒಟ್ಟಾಗಿ ಪಕ್ಷದ ಗೆಲುವಿಗೆ ಶ್ರಮಿಸುವುದಾಗಿ ಆರಂಭದಲ್ಲಿ ಎಲ್ಲರೂ ಹೇಳಿದ್ದರು. ನಮ್ಮ ಅಭ್ಯರ್ಥಿ ‘ಕೈ’ ಚಿಹ್ನೆಯಾಗಿದೆ ಎಂದೂ ಹೇಳಿದ್ದರು. ಆದರೆ ಕೊನೆಯ ಗಳಿಗೆಯಲ್ಲಿ ಈ ಹೇಳಿಕೆಯನ್ನು ಮರೆತಿದ್ದಾರೆ ಎನ್ನಲಾಗಿದ್ದು ಪುತ್ತೂರು ಕಾಂಗ್ರೆಸ್ ನ ಪ್ರಭಾವಿಯೋರ್ವರೇ ಅಸಮಾಧಾನ ಹೊಂದಿದ್ದು ತಮ್ಮ ನಡೆಯನ್ನು ನಿಗೂಢವಾಗಿರಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಬಲ್ಲಮೂಲಗಳಿಂದ ಲಭ್ಯವಾಗಿದೆ. ಪುತ್ತೂರು ಕಾಂಗ್ರೆಸ್ನಲ್ಲಿ ಏನಾದರೂ ಘಟನೆ ಸಂಭವಿಸಿದರೆ ಅದರ ಲಾಭ ಬಿಜೆಪಿ ಪಾಲಾಗಲಿದೆ ಎನ್ನುವ ಲೆಕ್ಕಾಚಾರ ಪುತ್ತೂರಿನಲ್ಲಿ ನಡೆಯುತ್ತಿದೆ.
ಪಕ್ಷದಲ್ಲಿ ಒಡಕು ಮೂಡದಂತೆ ಅಶೋಕ್ ರೈಯವರು ಎಲ್ಲರನ್ನು ಒಗ್ಗೂಡಿಸಿ ಚುನಾವಣೆ ಎದುರಿಸುತ್ತಾರೆ ಎಂಬ ಬಲವಾದ ನಂಬಿಕೆ ಕಾರ್ಯಕರ್ತರದ್ದು. ಎಲ್ಲದಕ್ಕೂ ಶೀಘ್ರದಲ್ಲೇ ಉತ್ತರ ಲಭಿಸಲಿದೆ.