ಕರಾವಳಿಕ್ರೈಂ

ಮನೆ ಕಟ್ಟಲು ಬಂದವನ ಜೊತೆ ಸೇರಿ ಮನೆಯ ಯಜಮಾನನನ್ನೇ ಮುಗಿಸಿದ ಕಿರಾತಕ ಪತ್ನಿ..!

ವಿಟ್ಲ: ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದಲ್ಲಿ ಮನೆಯಲ್ಲಿ ರಾತ್ರಿ ಮಲಗಿದ್ದ ವ್ಯಕ್ತಿಯೋರ್ವರು ಬೆಳಗ್ಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಪ್ರಕರಣ ತಿರುವು ಪಡೆದುಕೊಂಡಿದ್ದು, ಮೃತ ವ್ಯಕ್ತಿಯ ಪತ್ನಿಯೇ ಪ್ರಿಯಕರನೊಂದಿಗೆ ಸೇರಿಕೊಂಡು ಗಂಡನನ್ನು ಕೊಲೆ ನಡೆಸಿರುವುದು ತನಿಖೆ ವೇಳೆ ಬಹಿರಂಗಗೊಂಡಿದೆ.

ಆರೋಪಿಗಳಾದ ಆಶಾ ಹಾಗೂ ಯೋಗೀಶ್ ಗೌಡ

ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ವಿಟ್ಲ ಠಾಣಾ ಪೊಲೀಸರು ಮೃತ ವ್ಯಕ್ತಿಯ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.




ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಚೈತನ್ಯ ಕುಮೇರು ನಿವಾಸಿ ಅರವಿಂದ ಭಾಸ್ಕರ (39ವ.) ಕೊಲೆಯಾದವರು. ಅವರ ಪತ್ನಿ ಆಶಾ ಕೆ.(32 ವ.) ಹಾಗೂ ಆಕೆಯ ಪ್ರಿಯಕರ ಬಂಟ್ವಾಳ ತಾಲೂಕು ವಿಟ್ಲ ಪಡ್ನೂರು ಗ್ರಾಮದ ಪುರ್ಲಪ್ಪಾಡಿ ನಿವಾಸಿ ಐತಪ್ಪ ಗೌಡರ ಪುತ್ರ ಯೋಗೀಶ್ ಗೌಡ ( 34 ವ.)ಬಂಧಿತ ಆರೋಪಿಗಳು.

ಕೊಲೆಯಾದ ಅರವಿಂದ ಭಾಸ್ಕರ



ಅರವಿಂದ ಭಾಸ್ಕರರವರನ್ನು ಅವರ ಪತ್ನಿ ಹಾಗೂ ಆಕೆಯ ಪ್ರಿಯಕರ ಸೇರಿಕೊಂಡು ಕುತ್ತಿಗೆ ಹಿಸುಕಿ ಕೊಲೆ ಮಾಡಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಕಸಬಾ ಗ್ರಾಮದ ಮೇಗಿನಪೇಟೆ ನಿವಾಸಿ ರಘುನಾಥರವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನಲ್ಲಿ ಹಲವು ವಿಚಾರಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು.

ಫೆ.26ರಂದು ಬೆಳಿಗ್ಗೆ ತನ್ನ ತಂದೆಗೆ ಕರೆ ಮಾಡಿದ ಆಶಾ, ಪತಿ ಅರವಿಂದ ಭಾಸ್ಕರ ನಿನ್ನೆ ರಾತ್ರಿ 10 ಗಂಟೆಗೆ ಮನೆಯ ಕೋಣೆಯಲ್ಲಿ ಮಲಗಿದ್ದು, ಬೆಳಗ್ಗಿನ ಜಾವ 7.30 ಸುಮಾರಿಗೆ ನೋಡುವಾಗ ಮಲಗಿದ್ದಲ್ಲಿಂದ ಏಳುತ್ತಿಲ್ಲ ಮನೆಗೆ ಬನ್ನಿ ಎಂದು ತಿಳಿಸಿದ್ದರು. ಆ ಬಳಿಕ ಅರವಿಂದ ಭಾಸ್ಕರರವರನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದ ವಿಚಾರ ತಿಳಿದು ಅಲ್ಲಿಗೆ ಹೋದಾಗ ವೈದ್ಯರು ಅರವಿಂದ ಭಾಸ್ಕರನನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದರು.ಮೃತದೇಹದ ಸ್ಥಿತಿಗತಿಯನ್ನು ಪರಿಶೀಲಿಸಿದಾಗ, ಕುತ್ತಿಗೆಯನ್ನು ಅಮುಕಿ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿರುವ ಸಂಶಯ ವ್ಯಕ್ತವಾಗಿದೆ’ ಎಂದು ರಘುನಾಥರವರು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.





ಮೇಸ್ತ್ರಿ ಕೆಲಸ ನಿರ್ವಹಿಸುತ್ತಿದ್ದ ಅರವಿಂದ ಭಾಸ್ಕರ ಸುಮಾರು ಹದಿನಾಲ್ಕು ವರುಷಗಳ ಹಿಂದೆ ಆಶಾರವರನ್ನು ವಿವಾಹವಾಗಿದ್ದರು.ಆ ಬಳಿಕದ ದಿನಗಳಲ್ಲಿ ಅನ್ಯೋನ್ಯವಾಗಿದ್ದ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಭಾಸ್ಕರರವರು ವಿಪರೀತ ಕುಡಿಯುತ್ತಿದ್ದರು ಎನ್ನಲಾಗಿದೆ. ಮನೆಯ ಅಡಿಕೆಯನ್ನು ಮಾರಾಟ ಮಾಡಿ ದುಂದು ವೆಚ್ಚಮಾಡುತ್ತಿದ್ದ ಹಿನ್ನೆಲೆಯಲ್ಲಿ ಇದಕ್ಕೆ ಆಶಾರವರು ಆಕ್ಷೇಪ ವ್ಯಕ್ತ ಪಡಿಸುತ್ತಿದ್ದರು ಮಾತ್ರವಲ್ಲದೆ ಅವರಿಬ್ಬರ ಮಧ್ಯೆ ಆಗಾಗ ಇದೇ ವಿಚಾರಕ್ಕಾಗಿ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.





ಹಿಂದಿನ ಹಳೆ ಮನೆಯಲ್ಲಿ ವಾಸವಾಗಿದ್ದ ಅರವಿಂದ ಭಾಸ್ಕರ ದಂಪತಿ ಹೊಸಮನೆ ನಿರ್ಮಾಣ ಮಾಡುವ ಕೆಲಸ ಆರಂಭಿಸಿದ್ದರು. ಹೊಸ ಮನೆಯ ಸೆಂಟ್ರಿಂಗ್ ಕೆಲಸ ನಿರ್ವಹಿಸಲು ಬಂದಿದ್ದ ಯೋಗೀಶ್ ಹಾಗೂ ಆಶಾರವರು ಬಳಿಕದ ದಿನಗಳಲ್ಲಿ ಅನ್ಯೋನ್ಯವಾಗಿದ್ದರು ಎನ್ನುವ ಮಾಹಿತಿ ತನಿಖೆಯಿಂದ ಗೊತ್ತಾಗಿದೆ.

ಯೋಗೀಶ್ ಹಾಗೂ ಆಶಾರವರು ಪರಸ್ಪರ ಹತ್ತಿರವಾಗುತ್ತಿದ್ದಂತೆ ಅರವಿಂದ ಭಾಸ್ಕರರನ್ನು ದೂರ ಮಾಡುವ ಯೋಜನೆಯನ್ನು ಮಾಡಿಕೊಂಡಿದ್ದ ಅವರಿಬ್ಬರು ಆ ಸಮಯಕ್ಕಾಗಿ ಕಾಯುತ್ತಿದ್ದರು. ದಿನಂಪ್ರತಿ ಕುಡಿತದ ಚಟ ಹೊಂದಿದ್ದ ಅರವಿಂದ ಭಾಸ್ಕರರಿಂದ ವಿಮುಕ್ತಿ ಹೊಂದುವ ಯೋಚನೆಯನ್ನು ಮಾಡಿದ್ದ ಆಶಾ ಅದಕ್ಕಾಗಿ ತನ್ನ ಪ್ರಿಯಕರ ಯೋಗೀಶ್‌ನೊಂದಿಗೆ ಸೇರಿಕೊಂಡು ಪತಿಯನ್ನೆ ಮುಗಿಸುವ ಯೋಜನೆಯನ್ನು ರೂಪಿಸಿಕೊಂಡಿದ್ದರು. ಅರವಿಂದ ಭಾಸ್ಕರ ಕುಡಿದು ಮಲಗಿದ ಬಳಿಕ ಅವರ ಪತ್ನಿ ಆಶಾ ಪ್ರಿಯಕರ ಯೋಗೀಶ್‌ನೊಂದಿಗೆ ಸೇರಿಕೊಂಡು ತಲೆ ದಿಂಬಿನಿಂದ ಉಸಿರುಗಟ್ಟಿಸಿ ಅರವಿಂದ ಭಾಸ್ಕರರನ್ನು ಕೊಲೆ ನಡೆಸಿದ್ದರು. ಬಳಿಕ ಯಾರಿಗೂ ಸಂಶಯ ಬರಬಾರದೆಂದು ಬೆಳಗ್ಗೆ ಎದ್ದ ಆಶಾ, ಪತಿ ರಾತ್ರಿ ಮಲಗಿದವರು ಬೆಳಗ್ಗೆ ಮೃತಪಟ್ಟ ಸ್ಥಿತಿಯಲ್ಲಿದ್ದಾರೆ ಎಂದು ಸ್ಥಳೀಯರಿಗೆ ಹಾಗೂ ಸಂಬಂಧಿಕರಿಗೆ ಮಾಹಿತಿ ನೀಡಿದ್ದರು. ತರಾತುರಿಯಲ್ಲಿ ಅಂತ್ಯ ಸಂಸ್ಕಾರಕ್ಕೂ ಮುಂದಾಗಿದ್ದರು ಎನ್ನುವ ಮಾಹಿತಿ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.

ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳೀಯ ಕೆಲವರು ಹಾಗೂ ಮೃತರ ಸಂಬಂಧಿಕರಿಂದ ಕೆಲವೊಂದು ಮಾಹಿತಿಯನ್ನು ಕಲೆಹಾಕಿದ್ದರು.

ಮನೆ ಕಟ್ಟಲು ಬಂದವನೇ ಮನೆಯ ಯಜಮಾನನ್ನು ಮುಗಿಸಿದ್ದು ಮತ್ತು ಮುಗಿಸಲು ಪತ್ನಿಯೇ ಪ್ಲಾನ್ ಮಾಡಿದ್ದು ಸಾರ್ವಜನಿಕ ವಲಯದಲ್ಲಿ ದಿಗ್ಭ್ರಮೆ ಮೂಡಿಸಿದೆ.

Leave a Reply

Your email address will not be published. Required fields are marked *

error: Content is protected !!