ಸುಳ್ಯ ಖಾಸಗಿ ಬಸ್ಸು ನಿಲ್ದಾಣ ಬಳಿಗೆ ಹೂವಿನ ಮಾರುಕಟ್ಟೆ ಸ್ಥಳಾಂತರ: ಹೂವಿನ ಮಾರುಕಟ್ಟೆ ಇದ್ದ ಸ್ಥಳದಲ್ಲಿ ಖಾಸಗಿ ವ್ಯಕ್ತಿಗಳಿಂದ ಕಾಮಗಾರಿ, ಆಕ್ಷೇಪ ವ್ಯಕ್ತಪಡಿಸಿದ ಎ ಎ ಪಿ ಮುಖಂಡ
ಸುಳ್ಯ ಖಾಸಗಿ ಬಸ್ಸು ನಿಲ್ದಾಣ ಬಳಿ ಹಿಂದುಸ್ತಾನ್ ಬಿಲ್ಡಿಂಗ್ ಮುಂಭಾಗದಲ್ಲಿದ್ದ ಹೂವಿನ ಮಾರುಕಟ್ಟೆಯನ್ನು ಬಸ್ಸು ನಿಲ್ದಾಣದ ಬಳಿ ಇರುವ ಕುರುಂಜಿ ವೆಂಕಟರಮಣ ಗೌಡರ ಪುತ್ಥಳಿಯ ಬಳಿಗೆ ಸ್ಥಳಾಂತರಿಸಲಾಗಿದೆ.

ಕಳೆದ ಕೆಲವು ವರ್ಷಗಳ ಮೊದಲು ಕುರುಂಜಿ ವೆಂಕಟರಮಣಗೌಡರ ಪುತ್ತಳಿ ನಿರ್ಮಾಣ ಬಸ್ಸು ನಿಲ್ದಾಣ ಅಭಿವೃದ್ಧಿಕರಣ ಸಂದರ್ಭ ಇದೇ ಸ್ಥಳದಿಂದ ಈ ಮಾರುಕಟ್ಟೆಯನ್ನು ಇದೀಗ ನೂತನವಾಗಿ ನಿರ್ಮಾಣಗೊಂಡಿರುವ ಹಿಂದುಸ್ತಾನ್ ಬಿಲ್ಡಿಂಗ್ ಕಟ್ಟಡದ ಮುಂಭಾಗಕ್ಕೆ ಸ್ಥಳಾಂತರಿಸಲಾಗಿತ್ತು.
ನೂತನವಾದ ಕಟ್ಟಡ ಬಂದ ಬಳಿಕ ಕಟ್ಟಡ ಮಾಲಕರ ಕೋರಿಕೆಯ ಮೇರೆಗೆ ಈ ಮಾರುಕಟ್ಟೆಯ ತೆರವಿಗಾಗಿ ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಚರ್ಚೆಗಳು ನಡೆಯುತ್ತಿದ್ದವು.
ಇದೀಗ ಹೂವಿನ ಮಾರುಕಟ್ಟೆಯನ್ನು ಸ್ಥಳಾಂತರಗೊಳಿಸಲಾಗಿದ್ದು ಅದೇ ಜಾಗದಲ್ಲಿ ಹಿಂದುಸ್ತಾನ್ ಬಿಲ್ಡಿಂಗ್ ಸಂಸ್ಥೆಯವರು ಬೃಹತ್ ಹೊಂಡವನ್ನು ತೆಗೆದು ಯಾವುದೋ ಕಾಮಗಾರಿಯನ್ನು ಆರಂಭಿಸಿದ್ದಾರೆ.
ಈ ಘಟನೆಯ ಕುರಿತು ಸುಳ್ಯ ಎ ಎ ಪಿ ಪಕ್ಷದ ಮುಖಂಡ ರಶೀದ್ ಜಟ್ಟಿಪಳ್ಳ ಫೆಬ್ರವರಿ 18ರಂದು ಕಾಮಗಾರಿ ನಡೆಸಲು ಗುಂಡಿ ತೋಡಿರುವ ಜಾಗಕ್ಕೆ ತೆರಳಿ ಪರಿಶೀಲನೆ ನಡೆಸಿ ಇದರ ಬಗ್ಗೆ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.