ನಾನು ಕೂಲಿ ಕಾರ್ಮಿಕನಾಗಿದ್ದೆ; ಎರಡು ರೂ ಕೂಲಿಗೆ ಗುಂಡಿ ತೋಡಿದ್ದೆ: ಬಾಲ್ಯದ ಕಷ್ಟದ ಜೀವನದ ನೆನಪು ಬಿಚ್ಚಿಟ್ಟ ಸಚಿವ ಅಂಗಾರ
ಸುಳ್ಯ: ಶಾಸಕನಾಗುವ ಮುನ್ನ ನಾನು ಕೂಡಾ ಕೂಲಿ ಕಾರ್ಮಿಕನಾಗಿದ್ದೆ, ಎಲ್ಲಾ ರೀತಿಯ ಕೂಲಿ ಕೆಲಸ ಮಾಡುತಿದ್ದೆ. ಆಗ ನಮಗೆ ದೊರೆಯುತ್ತಿದ್ದ ಸಂಬಳ ಒಂದು ಅಡಕೆ ಗುಂಡಿಗೆ ಕೇವಲ ಎರಡು ರೂ ಮಾತ್ರ. ಆಗ ನಮಗೆ ಯಾವುದೇ ಸವಲತ್ತುಗಳು ಸರಕಾರದಿಂದ ದೊರೆಯುತ್ತಿರಲಿಲ್ಲ. ಆದರೂ ನಾವು ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದ್ದೆವು ಎಂದು ಸಚಿವ ಎಸ್ ಅಂಗಾರ ಹೇಳಿದರು.
ಕಡಬದಲ್ಲಿ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಟೂಲ್ ಕಟ್ಟು ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತಮ್ಮ ಬಾಲ್ಯದ ನೆನಪನ್ನು ಬಿಚ್ಚಿಟ್ಟರು.
ನಾವೀಗ ಬಡತನದ ಬಗ್ಗೆ ಮಾತನಾಡಬಹುದು, ಆದರೆ ನಾನು ಸ್ವತಃ ಅದನ್ನು ಅನುಭವಿಸಿದವನು. ಆ ಸಂದರ್ಭದಲ್ಲಿ ಗಂಜಿಗೆ ಗತಿಯಿರಲಿಲ್ಲ, ಅಂತಹ ಸಮಯದಲ್ಲಿ ನಾನು ಕೂಲಿ ಕಾರ್ಮಿಕನಾಗಿದ್ದೆ, ಬಡತನದ ಕಾರಣದಿಂದಾಗಿ ಕೂಲಿ ಕೆಲಸಕ್ಕೆ ಹೋಗಿ ಶಾಲಾ ಕಲಿಕೆಯನ್ನು ಅರ್ಧದಲ್ಲೇ ಮೊಟಕುಗೊಳಿಸಲಾಯಿತು ಎಂದು ಅವರು ಹೇಳಿದರು.
ಈಗ ನಮಗೆ ಎಲ್ಲಾ ರೀತಿಯ ಅನುಕೂಲತೆಗಳಿವೆ, ಸರಕಾರದ ಸವಲತ್ತುಗಳಿವೆ ಅದನ್ನು ನಾವು ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.