ಪುತ್ತೂರು: ಬಿಜೆಪಿಯೊಳಗೆ ಚರ್ಚೆಗೆ ಗ್ರಾಸವಾದ ಶಾಸಕರ ‘ಅಣಬೆ’ ಹೇಳಿಕೆ : ಅರುಣ್ ಪುತ್ತಿಲ ಬಳಗದವರಿಂದ ಆಕ್ರೋಶ
ಮತ್ತೂರು ಶಾಸಕ ಸಂಜೀವ ಮಠಂದೂರು ಅವರ ಹೇಳಿಕೆಯೊಂದು ಸಾಮಾಜಿಕ ಜಾಲ ತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ತೂರು ಭೇಟಿಯ ಕುರಿತು ಪುತ್ತೂರು ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಶಾಸಕ ಸಂಜೀವ ಮಠಂದೂರು ಅವರಲ್ಲಿ ಪತ್ರಕರ್ತರು, ‘ಅಮಿತ್ ಶಾ ಸ್ವಾಗತಕ್ಕೆ ಕೆಲ ಮುಖಂಡರಿಂದ ಪ್ರತ್ಯೇಕ ಅಲಂಕಾರ’ ನಡೆಯುತ್ತಿರುವ ಬಗ್ಗೆ ಕೇಳಿದಾಗ ಉತ್ತರಿಸಿದ ಶಾಸಕರು ಚುನಾವಣಿ ಬಂದಾಗ ಇದೆಲ್ಲಾ ಸಹಜ, ಹೊಸ ಹೊಸ ವ್ಯಕ್ತಿಗಳು ಬರುತ್ತಾರೆ. ಮಳೆಗಾಲ ಬಂದಾಗ ಅಣಬೆಗಳು ಹುಟ್ಟಿಕೊಳ್ಳುತ್ತವೆ. ಮಳೆಗಾಲ ಮುಗಿದಾಗ ಅಣಬೆ ಕೂಡಾ ಇರುವುದಿಲ್ಲ. ಯಾರು ಪ್ರತ್ಯೇಕ ಅಲಂಕಾರ ಮಾಡಿದರೂ ಅದನ್ನು ಬಿಜೆಪಿ ಸ್ವಾಗತಿಸುತ್ತದೆ ಎಂದು ಹೇಳಿದ್ದರು.
ಈ ಹೇಳಿಕೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಅಮಿತ್ ಶಾ ಅವರಿಗೆ ಶುಭ ಕೋರಿ ಬೃಹತ್ ಕಟೌಟ್‌ಗಳನ್ನು ಬಿಜೆಪಿಯ ಅರುಣ್ ಕುಮಾರ್ ಪುತ್ತಿಲ ಅವರು ಪೇಟೆ ಬದಿಗಳಲ್ಲಿ ಅಳವಡಿಸಿದ್ದು ಶಾಸಕರನ್ನು ಅವರನ್ನೇ ಉದ್ದೇಶಿಸಿ ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ಅರುಣ್ ಕುಮಾರ್ ಪುತ್ತಿಲ ಪರ ಇರುವವರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಯಾರು ಅಣಬೆ ಎಂದು ಚುನಾವಣೆಯಲ್ಲಿ ತೋರಿಸಿಕೊಡುತ್ತೇವೆ ಎಂದು ಕೆಲವರು ಬರೆದುಕೊಂಡಿದ್ದಾರೆ. ಪುತ್ತಿಲ ಅವರನ್ನು ಉದ್ದೇಶಿಸಿಯೇ ಶಾಸಕರು ಅಣಬೆ ಹುಟ್ಟಿಕೊಳ್ಳುತ್ತದೆ ಎಂದು ಹೇಳಿಕೆ ನೀಡಿದ್ದಾರೆ ಎಂದು ಹಲವರು ಜಾಲತಾಣದಲ್ಲಿ ಚರ್ಚೆ ಶುರು ವಿಟ್ಟುಕೊಂಡಿದ್ದಾರೆ.
ಟ್ವಿಟರ್ ಅಭಿಯಾನದ ವಿಚಾರವನ್ನು ಶಾಸಕರು ಉಲ್ಲೇಖ ಮಾಡುವ ಮೂಲಕ ಪುತ್ತಿಲರಿಗೇ ಪರೋಕ್ಷ ಟಾಂಗ್ ನೀಡಿದ್ದಾರೆ ಎದೂ ಚರ್ಚೆ ಆಗುತ್ತಿದೆ.