ಕರಾವಳಿ

ಸುಳ್ಯ :ರಸ್ತೆ ಡಾಮರೀಕರಣ ಕಾಮಗಾರಿ ಕಳಪೆ ಆರೋಪ, ಪ್ರತಿಭಟನೆಗಿಳಿದ ಸ್ಥಳೀಯರು:ಅಧಿಕಾರಿಗಳೊಂದಿಗೆ ಪರಿಶೀಲನೆಯ ಪಾದಯಾತ್ರೆ ಹೊರಟ ಪ್ರತಿಭಟನಾಕಾರರು



ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ನಾರ್ಕೋಡು ಕೋಲ್ಚಾರು ಕನ್ನಡಿತೋಡು ರಸ್ತೆ ಮೂಲಕ ಅಂತರ್ ರಾಜ್ಯ ಸಂಪರ್ಕದ ಮುಖ್ಯ ರಸ್ತೆಯ ಕಾಮಗಾರಿ ನಡೆಯುತ್ತಿದ್ದು ಇದರ ಡಾಂಬರೀಕರಣ ಕಳಪೆಯಾಗಿದೆ ಎಂದು ಆರೋಪಿಸಿ ತಿಳಿಯರು ಪ್ರತಿಭಟನೆಗೆ ಇಳಿದ ಘಟನೆ ಇಂದು ವರದಿಯಾಗಿದೆ.

ಲೋಕೋಪಯೋಗಿ ಇಲಾಖೆಗೆ ಸೇರಿದ ಈ ರಸ್ತೆಯನ್ನು ಕಳೆದ 4 ವರ್ಷಗಳ ಹಿಂದೆ ಶಾಸಕ ಎಸ್.ಅಂಗಾರ ರವರು ಕೋಲ್ಚಾರಿನಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು. ರಸ್ತೆ ಅಭಿವೃದ್ಧಿಗಾಗಿ 10.5 ಕೋಟಿ ರೂ ಬಿಡುಗಡೆಗೊಂಡು ಜೆ.ಡಿ.ಸುವರ್ಣ ಎಂಬ ಗುತ್ತಿಗೆದಾರರು ಕಾಮಗಾರಿ ಆರಂಭಿಸಿದ್ದಾರೆ.

ಇದೀಗ ಕಾಮಗಾರಿ ನಡೆದ ಜಾಗದಲ್ಲಿ ನಾರ್ಕೋಡಿನಿಂದ ಕನ್ನಡಿ ತೋಡಿನವರೆಗೆ ಕಳೆದ ವಾರವಷ್ಟೇ ಹಾಕಿರುವ ಡಾಮರೀಕರಣ ಅವೈಜ್ಞಾನಿಕವಾಗಿ ನಿರ್ವಹಿಸಿದ್ದು ಈಗಾಗಲೇ ಎದ್ದು ಹೋಗಿವೆ. ರಸ್ತೆಯ ಮಣ್ಣಿನ ಮೇಲೆ ಜಲ್ಲಿ ಹಾಕದೆ ಬರಿ ಕಳಪೆ ಗುಣ ಮಟ್ಟದ ಡಾಮರು ಮಾತ್ರ ಹಾಕಿದ್ದಾರೆ.


ಜಲ್ಲಿ ಹಾಕಿ ಸಮರ್ಪಕ ರೀತಿಯಲ್ಲಿ ಕೆಲಸ ನಿರ್ವಹಿಸದೆ ಕಳಪೆ ಗುಣ ಮಟ್ಟದ ಕಾಮಗಾರಿ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಪ್ರತಿಭಟನೆಗೆ ಮುಂದಾಗಿದ್ದರು.

ಇದೇ ಸಂದರ್ಭ ಕಳೆದ ಒಂದು ದಿನ ಮೊದಲು ಶಾಸಕರು ಈ ರಸ್ತೆಯ ಮೂಲಕ ಕೇರಳಕ್ಕೆ ಹೋಗುತ್ತಿದ್ದ ಸಂದರ್ಭ ಸ್ಥಳೀಯರು ರಸ್ತೆಯ ಕಾಮಗಾರಿಯಲ್ಲಿ ಉಂಟಾದ ಲೋಪ ದೋಷಗಳ ಬಗ್ಗೆ ಶಾಸಕರ ಗಮನಕ್ಕೆ ತಂದಿದ್ದಾರೆ.

ಈ ವೇಳೆ ಶಾಸಕರು ದೂರವಾಣಿ ಮೂಲಕ ಮಾತನಾಡಿ ಇಂಜಿನಿಯರನ್ನು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುವಂತೆ ಆದೇಶ ನೀಡಿದ್ದಾರೆ.


ಈ ಹಿನ್ನಲೆಯಲ್ಲಿ ಇಂದು ಇಂಜಿನಿಯರ್ಗಳು ಬರುವ ಸೂಚನೆಯ ಮೇರೆಗೆ ಬೆಳಿಗ್ಗೆನಿಂದಲೇ ಸ್ಥಳೀಯರು ಜಮಾಯಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಬಂದಂತಹ ಅಧಿಕಾರಿಗಳನ್ನು ತಮ್ಮೊಂದಿಗೆ ಕರೆದುಕೊಂಡು ಕಳಪೆ ಕಾಮಗಾರಿ ಮಾಡಿರುವಂತಹ ರಸ್ತೆಯಲ್ಲಿ ಕಾಲ್ನಡಿಗೆ ಮೂಲಕ ಮೆರವಣಿಗೆಯ ರೀತಿಯಲ್ಲಿ ಸಂಚರಿಸಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಇದರ ಕುರಿತು ಸಾಧಕ ಬಾಧಕಗಳನ್ನು ಚರ್ಚೆಗಳನ್ನು ನಡೆಸಿದ ಸ್ಥಳೀಯರು ಪ್ರತಿಭಟನೆ ಮಾಡುವ ನಿರ್ಧಾರ ಕೈಗೊಂಡು ದೊಡ್ಡ ಮೊತ್ತದ ಅನುದಾನವಿದ್ದರೂ ಈ ರೀತಿಯ ಕಾಮಗಾರಿ ನಿರ್ವಹಿಸಿ ಜನತೆಗೆ ಸಮಾಜಕ್ಕೆ ದ್ರೋಹ ಮಾಡುತ್ತಿರುವುದನ್ನು ಖಂಡಿಸುವುದಾಗಿ ಸ್ಥಳೀಯ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಳಿಕ ಸ್ಥಳೀಯ ಪಂಚಾಯತ್ ಉಪಾಧ್ಯಕ್ಷ ದಿನೇಶ್ ಕಣಕ್ಕೂರು ರವರು ದೂರವಾಣಿ ಮೂಲಕ ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಿಸಿದಾಗ ಮುಂದಿನ ಒಂದು ವಾರದೊಳಗೆ ಗುತ್ತಿಗೆದಾರರನ್ನು ಕರೆಸಿ ಸಮರ್ಪಕ ಕಾಮಗಾರಿ ನಿರ್ವಹಿಸುವ ಬಗ್ಗೆ ಭರವಸೆಯನ್ನು ನೀಡಿದ್ದಾರೆ.


ಇದರಿಂದ ಸಮಾಧಾನಗೊಂಡ ನಾಗರಿಕರು ಭರವಸೆ ಮೇರೆಗೆ ಒಪ್ಪಿಕೊಂಡು ಪ್ರತಿಭಟನೆ ಹಿಂತೆಗೆದರು.
ಪಂಚಾಯತ್ ಉಪಾಧ್ಯಕ್ಷ ದಿನೇಶ್ ಕಣಕ್ಕೂರು ಇಂಜಿನಿಯರ್ ರವರು ತಡವಾಗಿ ಬಂದ ಕಾರಣಕ್ಕೆ ಅಧಿಕಾರಿ ಯವರನ್ನು ತರಾಟೆಗೆತ್ತಿಕೊಂಡರು.
ಪ್ರತಿಭಟನೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!