ಕೊಡಗು ಯುವತಿಯ ಬರ್ಬರ ಕೊಲೆ ಪ್ರಕರಣ: ಕೆರೆಯ ನೀರು ಖಾಲಿ ಮಾಡಿಸಿ ಶೋಧಕಾರ್ಯ
ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಯುವತಿ ಯೋರ್ವರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ವರದಿಯಾಗಿದ್ದು ಘಟನೆಯಿಂದ ಕೊಡಗಿನ ಜನರು ಬೆಚ್ಚಿಬಿದ್ದಿದ್ದಾರೆ.
ಕೊಲೆಯಾದ ಯುವತಿಯನ್ನು ವಿರಾಜಪೇಟೆ ತಾಲ್ಲೂಕಿನ ನಾಂಗಲ ಗ್ರಾಮದ ಬುಟ್ಟಿಯಂಡಪ್ಪ ಮಾದಪ್ಪ, ಸುನಂದ ಅವರ ಪುತ್ರಿ ಬುಟ್ಟಿಯಂಡ ಆರತಿ (24) ಎಂದು ಗುರುತಿಸಲಾಗಿದೆ.
ಘಟನಾ ಸ್ಥಳಕ್ಕೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಮನೆಯಿಂದ ಹೊರಗೆ ಕರೆಸಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಆರತಿ ಕೊಲೆಯಾದ ಸ್ಥಳದಲ್ಲಿ ಒಂದು ಹೆಲ್ಮೆಟ್ ಪತ್ತೆ ಆಗಿದೆ.
ಅದೇ ಗ್ರಾಮದ ತಮ್ಮಯ್ಯ ಎಂಬಾತನ ಹೆಲ್ಮೆಟ್ ಅನತಿ ದೂರದಲ್ಲಿ ಬಿದ್ದಿದ್ದು ಆತನ ಬೈಕ್ ಪತ್ತೆ ಆಗಿದೆ.
ತಮ್ಮಯ್ಯ ಎಂಬಾತ ಮೂರು ದಿನಗಳಿಂದ ಆರತಿಗೆ ಟಾರ್ಚರ್ ನೀಡುತ್ತಿದ್ದ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಭಾನುವಾರ ರಾತ್ರಿ ಈತನೇ ಹತ್ಯೆ ಮಾಡಿರುವ ಬಗ್ಗೆ ಅನುಮಾನ ಮೂಡಿದ್ದು, ತಮ್ಮಯ್ಯನ ಮೊಬೈಲ್ ಹಾಗೂ ಚಪ್ಪಲಿ ಕೊಲೆಯಾದ ಸ್ಥಳದಲ್ಲಿದೆ.
ಕೊಲೆಯಾದ ಅನತಿ ದೂರದಲ್ಲಿ ಬೈಕ್ ಕೂಡ ಪತ್ತೆ ಆಗಿದೆ. ಆರತಿಯ ಹತ್ಯೆ ಬಳಿಕ ತಮ್ಮಯ್ಯ ಕೂಡ ವಿಷ ಸೇವಿಸಿರುವ ಬಗ್ಗೆ ಅನುಮಾನ ಇದೆ. ಮದ್ಯದ ಜತೆಗೆ ವಿಷ ಸೇವಿಸಿರಬಹುದೆಂದು ಶಂಕಿಸಲಾಗಿದೆ. ಸದ್ಯ ಆರೋಪಿಯ ಪತ್ತೆಗಾಗಿ ಪೊಲೀಸರ ಹುಡುಕಾಟ ನಡೆಸಿದ್ದು, ತಮ್ಮಯ್ಯಗೂ ಮೃತ ಆರತಿಗೂ ಏನು ಸಂಬಂಧ, ಯಾವ ಕಾರಣಕ್ಕೆ ಹತ್ಯೆ ಆಗಿರಬಹುದು ಎಂದು ತನಿಖೆ ಮುಂದುವರಿಸಿದ್ದಾರೆ ಎನ್ನಲಾಗಿದೆ.
ಯುವತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ತಿಮ್ಮಯ್ಯನಿಗಾಗಿ ಸ್ಥಳೀಯ ಕೆರೆಯ ನೀರನ್ನು ಖಾಲಿ ಮಾಡಿಸಿ ಶೋಧಕಾರ್ಯ ಮುಂದುವರಿಸಲಾಗಿದೆ.
ವಿರಾಜಪೇಟೆ ನಾಂಗಲ ಗ್ರಾಮದಲ್ಲಿ ಯುವತಿ ಕೊಲೆ ಪ್ರಕರಣದ ಆರೋಪಿ ತಿಮ್ಮಯ್ಯ ಎಂಬುವವನ ಹೆಲ್ಮೆಟ್ ಮತ್ತು ಆತನ ದ್ವಿಚಕ್ರವಾಹನ ಕೊಲೆಯಾದ ಸ್ಥಳದ ಕೆಲವೇ ದೂರದಲ್ಲಿ ಕಂಡು ಬಂದ ಕಾರಣ, ಆತ ಯುವತಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಕಂಡಂಗಾಲ ಗ್ರಾಮದ ಕೆರೆಯಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು ಕೆರೆಯ ಬಳಿ ವಿರಾಜಪೇಟೆ ಪೊಲೀಸರ ಬೀಡು ಬಿಟ್ಟಿದ್ದಾರೆ.