ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ ಕರೆ ಮಾಡಿ ರೂ.100 ಕೋಟಿ ಬೇಡಿಕೆ ಒಡ್ಡಿದ ಪುತ್ತೂರಿನ ಖತರ್ನಾಕ್ ಗ್ಯಾಂಗ್‌ಸ್ಟರ್
ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಗೆ ಬೆದರಿಕೆ ಕರೆ ಮಾಡಿದ ಆರೋಪಿಯ ಗುರುತು ಪತ್ತೆ ಹಚ್ಚಲಾಗಿದ್ದು ಕರ್ನಾಟಕದ ಬೆಳಗಾವಿ ಜೈಲಿನಲ್ಲಿ ಬಂಧನದಲ್ಲಿರುವ ಗ್ಯಾಂಗ್‌ಸ್ಟರ್ ಪುತ್ತೂರಿನ ಜಯೇಶ್ ಎಂಬಾತ ಈ ಕರೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಜಯೇಶ್ ಹಲವು ಕೊಲೆ ಸುಲಿಗೆಗಳಲ್ಲಿ ಪ್ರಕರಣಗಳಲ್ಲಿ ಆರೋಪಿಯಾಗಿದ್ದು ಗಡ್ಕರಿ ಕಛೇರಿಗೆ ದೂರವಾಣಿ ಕರೆ ಮಾಡಿ 100 ಕೋಟಿ ಹಣ ನೀಡುವಂತೆ ಬೇಡಿಕೆ ಇರಿಸಿ ಬೆದರಿಕೆ ಹಾಕಿದ್ದ.
ಜಯೇಶ್ ಪುತ್ತೂರಿನಲ್ಲಿ ನಡೆದ ಕೊಲೆ ಕೇಸೊಂದಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಒಳಗಾಗಿ ಬೆಳಗಾವಿ ಜೈಲಿನಲ್ಲಿದ್ದಾನೆ. ಈ ಹಿಂದೆ ಜೈಲಿನಲ್ಲಿದ್ದುಕೊಂಡೇ ಎಡಿಜಿಪಿ ಅಲೋಕ್ ಕುಮಾರ್ ಅವರಿಗೂ ಜೀವ ಬೆದರಿಕೆ ಕರೆ ಮಾಡಿದ್ದ ಜಯೇಶ್ ಕೊಲೆ ಕೇಸ್ ಸಂಬಂಧ ಪುತ್ತೂರು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ವೇಳೆ ಸಾಕ್ಷಿದಾರರನ್ನು ಕಂಡು ಆರೋಪ ಸಾಬೀತಾಗಲಿದೆ ಎಂಬ ಭಯದಿಂದ ಕೋರ್ಟ್ ಕಿಟಕಿ ಹಾರಿ ತಪ್ಪಿಸಿಕೊಳ್ಳಲು ವಿಫಲ ಪ್ರಯತ್ನ ಮಾಡಿದ್ದ.
ಕಾಸರಗೋಡಿನಲ್ಲಿ ಮುಸ್ಲಿಂ ಹುಡುಗಿಯೊಬ್ಬಳನ್ನು ಮದುವೆಯಾಗಿ ಆ ಬಳಿಕ ಆಕೆಯೊಂದಿಗೆ ಜಗಳವಾಡಿ ತೆಂಗಿನ ಮರ ಹತ್ತಿ ಕುಳಿತಿದ್ದ ಜಯೇಶ್‌ನನ್ನು ಕೆಳಗಿಳಿಸಿ ಪೊಲೀಸರು ವಿಚಾರಣೆ ನಡೆಸಿದಾಗ ಪುತ್ತೂರಿನ ಕೊಲೆ ಪ್ರಕರಣ ಬಯಲಿಗೆ ಬಂದಿತ್ತು.
ಕೊಲ್ಲಾಪುರ ಟೆರೆರಿಸ್ಟ್ ವಿರೋಧಿ ದಳ ಮತ್ತು ನಾಗ್ಪುರ ಪೊಲೀಸರು ಜೈಲಿಗೆ ಭೇಟಿ ನೀಡಿ ತನಿಖೆ ನಡೆಸಿದ್ದ ವೇಳೆ ಈತನ ಬಳಿ ಇದ್ದ ಡೈರಿಯಲ್ಲಿ ಗಡ್ಕರಿ ಕಛೇರಿಗೆ ತಿಳಿಸಿದ್ದ ನಂಬರ್ ಸೇರಿದಂತೆ ಹಲವು ನಂಬರ್‌ಗಳು ಪತ್ತೆಯಾಗಿದೆ.ಆದರೆ ಕಾಲ್ ಮಾಡಿದ ಮೊಬೈಲ್ ಇನ್ನೂ ಪತ್ತೆಯಾಗಿಲ್ಲ.ತನಿಖೆ ಮುಂದುವರಿದಿದೆ.