ಕರಾವಳಿ

ಮಣ್ಮರೆಯಾದರೂ ಮನಮರೆಯದ ಮಂದಸ್ಮಿತ…

ಮರ್ಹೂಮ್ ನೌಶಾದ್ ಹಾಜಿ ಸೂರಲ್ಪಾಡಿ

ಮನುಷ್ಯ ಎಷ್ಟು ವರ್ಷ ಬದುಕಿದ್ದ ಎಂಬುದು ಮುಖ್ಯವಲ್ಲ.ಅವನು ಹೇಗೆ ಬದುಕಿದ,ಏನು ಸಾಧಿಸಿದ ಎಂಬುದು ಮುಖ್ಯವಾಗುತ್ತದೆ.

ಆ ವ್ಯಕ್ತಿ ಬದುಕಿದ್ದು ಕೇವಲ ನಾಲ್ಕು ದಶಕಗಳು.ಆದರೆ,ತನ್ನ ಮರಣಕ್ಕೆ ದೇಶ,ವಿದೇಶಗಳಲ್ಲಿ ಸಾವಿರಾರು ಮಂದಿ ಶೋಕಿಸುವಂತೆ,ಕಂಬನಿ ಮಿಡಿಯುವಂತೆ,ಪ್ರಾರ್ಥಿಸುವಂತೆ,ಅಂತಿಮ ದರ್ಶನಕ್ಕೆ ತವಕಿಸುವಂತೆ ಮಾಡಿದ್ದು ಆತನ ಸಾಧನೆ.

“ನೌಶಾದ್ ಹಾಜಿ ಸೂರಲ್ಪಾಡಿ” ಅಗರ್ಭ ಶ್ರೀಮಂತನೇನು ಅಲ್ಲ,ರಾಜಕಾರಣಿ, ಸೆಲೆಬ್ರೇಟಿಯೂ ಆಗಿರಲಿಲ್ಲ.ಅವರ ಬದುಕು ಸರಳವಾಗಿತ್ತು. ಸದಾ ಮಂದಹಾಸದಿಂದ ಕೂಡಿದ ಮೊಗ,ಕಣ್ಣಲ್ಲಿ ಆತ್ಮೀಯತೆ,ಲವಲವಿಕೆ ….ಬಡವರಿಗಾಗಿ ಮಿಡಿವ ಹೃದಯ ವಿಶಾಲತೆ,ಸಾದಾತುಗಳ,ಆಲೀಮಿಗಳ ,ಹಿರಿಯರ ಮೇಲಿದ್ದ ಗೌರವ,ಉತ್ತಮ ಒಡನಾಟ, ಸಂಘಟನಾ ಚತುರತೆ…. ಒಟ್ಟಾರೆ, ಅವರಲ್ಲಿದ್ದ ಮಾನವೀಯ ಮೇರು ಗುಣಗಳು ಅವರ ಅಗಲಿಕೆಯ ದಿನ ಅಪರಿಚಿತರಾದ ನಮ್ಮಂತವರನ್ನೂ ಕಂಬನಿ ಮಿಡಿಯುವಂತೆ ಮಾಡಿತ್ತು.

ಅವರ ಮರಣಾ ನಂತರದ ಅವರ ಒಡನಾಡಿಗಳ ಬರಹಗಳು,ಅವರ ಅಂತಿಮ ದರ್ಶನಕ್ಕೆ ಸೇರಿದ ಜನಸ್ತೋಮ, ಪ್ರಾರ್ಥನೆ, ತಹ್ಲೀಲ್ ಗಳು ….ನಮ್ಮ ನಡುವೆ ಇಂತಹ ಒಬ್ಬ ವ್ಯಕ್ತಿ ಇದ್ದರೇ ಎಂದು ಚಕಿತಗೊಳಿಸುವಂತೆ ಮಾಡಿತು.ಅವರ ವ್ಯಕ್ತಿತ್ವವನ್ನು ಅನಾವರಣಗೊಳಿಸಿತ್ತು.

ನಾಯಕರು ಬಹಳಷ್ಟು ಮಂದಿ ಸಿಗಬಹುದು,ದಾನಿಗಳೂ ಇರಬಹುದು.ಆದರೆ, ತಾನೇ ಸ್ವತಃ ಜನರ ಬಳಿ ತೆರಳಿ ಸೇವಾಕಾರ್ಯಗಳನ್ನು ಮಾಡುವವರು ಸಿಗುವುದು ಅಪರೂಪ. ಅವರ ಅಗಲಿಕೆಯಿಂದ ಕಳಕೊಂಡಿರುವುದು ಆ ಮುದ್ದು ಮಕ್ಕಳು ಲಾಲಿಸುವ ತಂದೆಯನ್ನು, ಮಡದಿ ಪತಿಯನ್ನು ,ತಾಯಿ ಮಗನನ್ನು, ಕುಟುಂಬಸ್ಥರು ಓರ್ವ ಸದಸ್ಯನನ್ನು ಮಾತ್ರವಲ್ಲ…‌ಸಮಾಜ,ಸಮುದಾಯ ಒಬ್ಬ ಸಮಾಜ ಸೇವಕನನ್ನು,ನಾಯಕನನ್ನು, ಓರ್ವ ಸಹೃದಯಿ ಮನುಷ್ಯನನ್ನು.

ಅಲ್ಲಾಹು ಅವರ ಬರ್ಝಕಿ ಬದುಕಲ್ಲಿ ನೆಮ್ಮದಿ ನೀಡಲಿ.ಆ ಪುಟ್ಟ ಕಂದಮ್ಮಗಳಿಗೆ,ಅವರ ಪತ್ನಿ, ಕುಟುಂಬಸ್ಥರಿಗೆ ಸಹನೆಯನ್ನು ನೀಡಲಿ.

ಅವರ ಆದರ್ಶಗಳನ್ನು ಪಾಲಿಸುವುದು,ಯೋಜನೆಗಳನ್ನು ಮುಂದುವರೆಸುವುದೇ ಅವರಿಗೆ ನಾವು ನೀಡುವ ನಿಜ ಶ್ರದ್ಧಾಂಜಲಿ.
____
✍️ಹೈದರ್ ಆಲಿ ಐವತ್ತೊಕ್ಲು

Leave a Reply

Your email address will not be published. Required fields are marked *

error: Content is protected !!