ಆನ್‌ಲೈನ್ ಗೇಮ್‌ನಲ್ಲಿ ಸೋಲಿಸಿದ ದ್ವೇಷಕ್ಕೆ ಕೊಲೆ ಯತ್ನ: ಆರೋಪಿಗೆ ನಾಲ್ಕು ವರ್ಷ ಜೈಲು ಶಿಕ್ಷೆ
ಮಂಗಳೂರು: ಆನ್‌ಲೈನ್ ಗೇಮ್ ನಲ್ಲಿ ಸೋಲಿಸಿದ ವಿಚಾರದಲ್ಲಿ ನಗರದ ನಂದಿಗುಡ್ಡೆ ಬಳಿಯ ನಿವಾಸಿ ಪೃತ್ಯುಶ್ ಸಾಲ್ಯಾನ್ ಎಂಬವರಿಗೆ ಬೆದರಿಕೆಯೊಡ್ಡಿ, ಕೊಲೆಯತ್ನ ನಡೆಸಿರುವ ಪ್ರಕರಣದ ಆರೋಪಿ ಸಂಜಯ್ ಪೂಜಾರಿ ಎಂಬಾತನಿಗೆ ನ್ಯಾಯಾಲಯ ನಾಲ್ಕು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.

2023ರ ಮೇ 17ರಂದು ಸಂಜೆ ಪೃತ್ಯುಶ್ ತನ್ನ ಮನೆಯಿಂದ ನಂದಿಗುಡ್ಡೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಸಂಜಯ್ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು ಚೂರಿಯಿಂದ ಕೊಲೆಯತ್ನ ನಡೆಸಿ, ಜೀವಬೆದರಿಕೆಯೊಡ್ಡಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು.
ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ಪಿಎಸ್ಐ ಶೀತಲ್ ಅಲಗೂರು ಮತ್ತು ಪಿಎಸ್ಸೆಐ ಮನೋಹರ್ ಪ್ರಸಾದ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಸಂಜಯ್ ಪೂಜಾರಿಗೆ ಜ.31ರಂದು 4 ವರ್ಷ ಜೈಲು ಶಿಕ್ಷೆ ಮತ್ತು 20,500 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಜ್ಯೋತಿ ನಾಯಕ್ ವಾದಿಸಿದ್ದರು.





