ಬಿರಿಯಾನಿ ತಿಂದು ಕಾಲೇಜು ವಿದ್ಯಾರ್ಥಿನಿ ಮೃತಪಟ್ಟ ಪ್ರಕರಣ: ಉನ್ನತ ತನಿಖೆಗೆ ಆದೇಶ
ಕಾಸರಗೋಡು: ಬಿರಿಯಾನಿ ತಿಂದು ಅಸ್ವಸ್ಥಳಾಗಿದ್ದ ಉದುಮ ಮೂಲದ ಯುವತಿ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಪೆರುಂಬಳ ಬೇನೂರು ನಿವಾಸಿ ಅಂಜುಶ್ರೀ ಪಾರ್ವತಿ (19) ಮೃತ ಯುವತಿ.
ಆರು ದಿನಗಳ ಹಿಂದೆ ಉದುಮದ ಹೋಟೆಲ್ ಒಂದರಿಂದ ಆನ್ಲೈನ್ ಮೂಲಕ ಕುಜಿಮಂತಿ ಹೆಸರಿನ ಚಿಕನ್ ಬಿರಿಯಾನಿ ತರಿಸಿ ಅಂಜುಶ್ರೀ ಸೇವಿಸಿದ್ದಳು. ಇದಾದ ಬಳಿಕ ಆಕೆಯ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಕಾಸರಗೋಡಿನಲ್ಲಿ ಮೊದಲು ಚಿಕಿತ್ಸೆ ಪಡೆದು ಬಳಿಕ ಪರಿಸ್ಥಿತಿ ಗಂಭೀರವಾದ ಬೆನ್ನಲ್ಲೇ ಆಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ. ಪುಡ್ ಪಾಯಿಸನ್ನಿಂದ ಮೃತಪಟ್ಟಿದ್ದಾಳೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಹೊಸ ವರ್ಷದ ಹಿನ್ನೆಲೆಯಲ್ಲಿ ಬಿರಿಯಾನಿ ತರಿಸಿ ಊಟ ಮಾಡಿದ್ದರು. ಅಂಜು ಜೊತೆಗೆ ಊಟ ಮಾಡಿದ ಸ್ನೇಹಿತರಿಗೂ ಫುಡ್ ಪಾಯಿಸನ್ ಆಗಿದ್ದು, ಅವರು ಕೂಡ ಅಸ್ವಸ್ಥರಾಗಿದ್ದರು. ಆದರೆ ಅಂಜುಶ್ರೀ ಆರೋಗ್ಯ ಮಾತ್ರ ಹೆಚ್ಚು ಗಂಭೀರವಾಗಿತ್ತು. ಈ ಘಟನೆ ಗಮನಕ್ಕೆ ಬರುತ್ತಿದ್ದಂತೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.
ಅಂಜುಶ್ರೀ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದು, ಮೇಲ್ಪರಂಬ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಕಾಸರಗೋಡು ಮತ್ತು ಕಣ್ಣೂರಿನ ಅಧಿಕಾರಿಗಳು ಹೋಟೆಲ್‌ಗೆ ಭೇಟಿ ತನಿಖೆ ನಡೆಸಿದ್ದಾರೆ. ಅಂಜುಶ್ರೀ ಮಂಜೇಶ್ವರದ ಗೋವಿಂದ ಪೈ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದಳು.
ಕಳೆದ ಒಂದು ವಾರದ ಅಂತರದಲ್ಲಿ ಇದು ಎರಡನೇ ಫುಡ್ ಪಾಯಿಸನ್ ಸಾವಾಗಿದೆ. ಕೊಟ್ಟಾಯಂ ಮೂಲದ ರಶ್ಮಿ ಅವರು ‘ಅಲ್ಫಾಹಮ್’ ಸೇವಿಸಿ ಸೋಮವಾರ ಮೃತಪಟ್ಟಿದ್ದರು. ಅಲ್ಲದೆ ಇತ್ತೀಚೆಗೆ ಕಾಸರಗೋಡಿನಲ್ಲಿ ದೇವಾನಂದ ಎಂಬ ಬಾಲಕಿ ಶವರ್ಮಾ ತಿಂದು ಸಾವನ್ನಪ್ಪಿದ್ದಳು.