ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಬಿರಿಯಾನಿ ತಿಂದು ಯುವತಿ ಸಾವು: ತನಿಖೆಗೆ ಆದೇಶ
ಯುವತಿಯೊಬ್ಬಳು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಬಿರಿಯಾನಿ ತಿಂದು ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ ನಡೆದಿದೆ.
ಇದೀಗ ಈ ಬಗ್ಗೆ ದೂರು ದಾಖಲಿಸಲಾಗಿದ್ದು ತನಿಖೆ ನಡೆಸಲಾಗುತ್ತಿದೆ. 20 ವರ್ಷದ ಯುವತಿ ಶನಿವಾರ ಸ್ಥಳೀಯ ಹೋಟೆಲ್‌ನ ಬಿರಿಯಾನಿ ಖಾದ್ಯ ಸೇವಿಸಿ ಸಾವನ್ನಪ್ಪಿದ್ದಾಳೆ.
ಕೇರಳದ ಪೆರುಂಬಳದ ಅಂಜು ಶ್ರೀಪಾರ್ವತಿ ಅವರು ಡಿ.31 ರಂದು ಕಾಸರಗೋಡಿನ ರೋಮ್ಯಾನ್ಸಿಯಾ ಎಂಬ ರೆಸ್ಟೋರೆಂಟ್‌ನಿಂದ ಆನ್‌ಲೈನ್‌ನಲ್ಲಿ ಖರೀದಿಸಿದ ಬಿರಿಯಾನಿಯನ್ನು ತಿಂದ ನಂತರ ಆಕೆಗೆ ಹೊಟ್ಟೆ ನೋವು ಪ್ರಾರಂಭವಾಗಿತ್ತು, ತಕ್ಷಣ ಮನೆಯವರು ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು.
ಯುವತಿ ಶನಿವಾರ ಮುಂಜಾನೆ ಸಾವನ್ನಪ್ಪಿದ್ದಾಳೆ. ಆಕೆಯ ಪೋಷಕರು ದೂರು ನೀಡಿದ ನಂತರ ಪ್ರಕರಣ ದಾಖಲಿಸಲಾಗಿದೆ.
ಯುವತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು, ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಅಲ್ಲಿಂದ ಮಂಗಳೂರಿನ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವಳು ಸಾವನ್ನಪ್ಪಿದ್ದಾಳೆ.
ಕೇರಳದ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿರುವುದಾಗಿ ತಿಳಿದು ಬಂದಿದೆ.