ಕರಾವಳಿ

ಸುಳ್ಯ: ವಿವಾಹಿತ ಯುವಕ ನಿಗೂಢ ನಾಪತ್ತೆಯಾಗಿ ಏಳು ವರ್ಷ: ಸುರಕ್ಷಿತವಾಗಿ ಬರುತ್ತಾರೆ ಎನ್ನುವ ನಿರೀಕ್ಷೆಯಲ್ಲಿ ಇನ್ನೂ ಕಾಯುತ್ತಿರುವ ಮನೆಯವರು

ಸುಳ್ಯ: ಜಾಲ್ಸೂರು ಗ್ರಾಮದ ನಿವಾಸಿ ಬಟ್ಟೆ ವ್ಯಾಪಾರಿ ಅಬ್ದುಲ್ ಖಾದರ್ ಮತ್ತು ಅಲೀಮಾ ದಂಪತಿಗಳ ಹಿರಿಯ ಪುತ್ರ ಉಬೈದ್ (42 ವರ್ಷ) ಎಂಬುವವರು ಕಳೆದ ಏಳುವರೆ ವರ್ಷದ ಮೊದಲು ಮನೆಯಿಂದ ಹೇರ್ ಕಟಿಂಗ್ ಮಾಡಿಸಿ ಬರುತ್ತೇನೆ ಎಂದು ಹೇಳಿ ಹೋದವರು ಮರಳಿ ಮನೆಗೆ ಬಾರದೆ ನಾಪತ್ತೆಯಾಗಿದ್ದರು.


ಇಂದಿಗೂ ಕೂಡ ಮಗನ ಬರುವಿಕೆಗಾಗಿ ವೃದ್ದ ತಂದೆ, ತಾಯಿ ಕಣ್ಣಿನಲ್ಲಿ ಕಣ್ಣಿಟ್ಟು ಕಾಯುತ್ತಿರುವ ದೃಶ್ಯ ಮನಕಲಕುವಂತಿದೆ. ವಿವಾಹಿತರಾಗಿದ್ದ ಉಬೈದ್
ಅಂದು ಮನೆಯಿಂದ ಹೊರ ಹೋದಾಗ ಪತಿ ಸಂಜೆ ಮನೆಗೆ ಬರುತ್ತಾರೆ ಎಂದು ಕಾಯುತ್ತಿದ್ದ ಅವರ ಪತ್ನಿ ಅನೀಷಾ ತಮ್ಮ ಇಬ್ಬರು ಪುಟಾಣಿ ಮಕ್ಕಳೊಂದಿಗೆ ಪ್ರಸ್ತುತ ಪುತ್ತೂರು ತಾಲೂಕಿನ ಕೊಡಿಪಾಡಿ ಗ್ರಾಮದ ತಮ್ಮ ತವರು ಮನೆಯಲ್ಲಿದ್ದು ಇಂದು ಬರಬಹುದು ನಾಳೆ ಬರಬಹುದು ಎಂದು ಕಾಯುತ್ತಾ ಜೀವನ ಸಾಗಿಸುತ್ತಿದ್ದಾರೆ.

ಉಬೈದುರವರು ವಿವಾಹಕ್ಕೂ ಮೊದಲು ಹೊರದೇಶವಾದ ದುಬಾಯಿಯಲ್ಲಿ ಉದ್ಯೋಗದಲ್ಲಿ ಇದ್ದು ಬಳಿಕ ಅಲ್ಲಿಂದ ಬಂದವರು ಪುತ್ತೂರು ತಾಲೂಕು ಕೊಡಿಪಾಡಿ ನಿವಾಸಿ ಆನೀಷಾ ಎಂಬುವರೊಂದಿಗೆ ವಿವಾಹವಾಗಿದ್ದರು.
ಬಳಿಕ ತಮ್ಮ ಮನೆಯಲ್ಲಿ ಸಂತೋಷದ ಜೀವನ ನಡೆಸುತ್ತಿದ್ದ ಅವರು ದುಬೈಗೆ ತೆರಳದೇ ಇಲ್ಲೇ ಊರಿನಲ್ಲಿ ಸಣ್ಣ ಪುಟ್ಟ ಕೆಲಸವನ್ನು ಮಾಡುತ್ತಾ ಜೀವನ ಸಾಗಿಸುತ್ತಿದ್ದರು.


ಈ ಸಂದರ್ಭದಲ್ಲಿ ಅವರಿಗೆ ಎರಡು ಪುತ್ರರು ಜನಿಸಿದ್ದು ಇವರು ಮನೆಯಿಂದ ಹೋದ ಸಂದರ್ಭ ಹಿರಿಯವನಿಗೆ ಮೂರು ವರ್ಷ ಕಿರಿಯ ಪುತ್ರನಿಗೆ ಒಂದು ವರ್ಷ ಪ್ರಾಯವಾಗಿತ್ತು.
ಇಂದು ಅವರ ಹಿರಿಯ ಪುತ್ರ ನಾಲ್ಕನೇ ತರಗತಿ, ಕಿರಿಯ ಪುತ್ರ ಎರಡನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಮನೆ ಬಿಟ್ಟು ಹೋದ ಸಂದರ್ಭ ಮಾನಸಿಕವಾಗಿ ಅಲ್ಪಮಟ್ಟಿಗೆ ಖಿನ್ನತೆಗೆ ಒಳಗಾಗಿದ್ದ ಉಬೈದ್ ಮರಳಿ ಮನೆಗೆ ಬಾರದಿದ್ದಾಗ ಅವರ ತಂದೆ ಅಬ್ದುಲ್ ಖಾದರ್ ಮತ್ತು ಮನೆಯವರು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿ, ತಮ್ಮ ಸಂಬಂಧಿಕರ ಮನೆಗಳಲ್ಲಿ, ಮತ್ತು ಬೇರೆ ಬೇರೆ ಕಡೆಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಒಂದಲ್ಲಾ ಒಂದು ದಿನ ಮಗ ಬಂದು ಮನೆಯ ಕದ ತಟ್ಟಬಹುದು ಎಂಬ ನಿರೀಕ್ಷೆಯಲ್ಲಿ ಈಗಲೂ ಕಾಯುತ್ತಿದ್ದಾರೆ.


ಅಬ್ದುಲ್ ಖಾದರ್ ರವರು ಜಾಲ್ಸೂರು ಮುಖ್ಯಪೇಟೆಯ ಬಳಿ ಕಳೆದ ಐದು ದಶಕಗಳಿಂದ ಬಟ್ಟೆ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದು ತಮ್ಮ ನಾಲ್ವರು ಪುತ್ರರರಲ್ಲಿ ಹಿರಿಯ ಪುತ್ರ ಕಣ್ಮರೆಯಾದ ನೋವಿನಿಂದ ಇಂದಿಗೂ ಕಾಲ ಕಳೆಯುತ್ತಿದ್ದಾರೆ.


ಹಿರಿಯ ಮಗ ಮನೆ ಬಿಟ್ಟು ಹೋದ ನಂತರ ಆರೋಗ್ಯದಲ್ಲಿ ಏರುಪೇರು ಕಂಡಿರುವ ಅಬ್ದುಲ್ ಖಾದರ್ ರವರು ಇಂದಿಗೂ ತನ್ನ ಅಂಗಡಿಯ ಮುಂಭಾಗದಲ್ಲಿ ಬಂದು ನಿಲ್ಲುವ ಪ್ರತಿಯೊಂದು ಬಸ್ಸಿನಲ್ಲೂ ಒಂದಲ್ಲ ಒಂದು ಬಸ್ಸಿನಲ್ಲಿ ನನ್ನ ಮಗ ಬಂದು ಇಳಿಯಬಹುದು ಎಂಬ ವಿಶ್ವಾಸವನ್ನು ಕಣ್ಣೀರು ತುಂಬಿದ ಮನಸ್ಸಿನಿಂದ ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.


ನನ್ನ ಮಗನ ಮಾಹಿತಿ ಎಲ್ಲಿಯಾದರು, ಯಾರಿಗಾದರೂ ತಿಳಿದು ಬಂದರೆ ಈ ಕೆಳಗಿನ ದೂರವಾಣಿ ಸಂಖ್ಯೆಗೆ ತಿಳಿಸುವಂತೆ ಅವರು ಮಾಧ್ಯಮದ ಮೂಲಕ ಮನವಿ ಮಾಡಿಕೊಂಡಿದ್ದಾರೆ.
9880607887 ಅಬ್ದುಲ್ ಖಾದರ್ (ತಂದೆ)
9481389842 ರಫೀಕ್ (ಕಿರಿಯ ಸಹೋದರ).
ಆದಷ್ಟು ಶೀಘ್ರದಲ್ಲಿ ಈ ವೃದ್ಧ ತಂದೆ ತಾಯಿಯ ಪುತ್ರ ಉಬೈದ್ ಮರಳಿ ಮನೆಗೆ ಬರಲಿ, ಆ ಮುದ್ದು ಮಕ್ಕಳ ಮತ್ತು ತನ್ನ ಪ್ರೀತಿಯ ಪತಿಯ ಬರುವಿಕೆಯನ್ನ ಕಣ್ಣೀರಿನಿಂದ ಕಾಯುತ್ತಿರುವ ಪತ್ನಿ ಅನೀಷಾ ರವರ ಜೀವನದಲ್ಲಿ ಮತ್ತೆ ಬೆಳಕು ಚೆಲ್ಲಲಿ ಎಂಬುವುದೇ ನಮ್ಮ ಆಶಯ
✍️ ಹಸೈನಾರ್ ಜಯನಗರ

Leave a Reply

Your email address will not be published. Required fields are marked *

error: Content is protected !!