ಸುಳ್ಯ: ಈಡೇರದ 28 ವರ್ಷಗಳ ರಸ್ತೆ ಅಭಿವೃದ್ಧಿ ಬೇಡಿಕೆ: ಪಕ್ಷದ ಚಟುವಟಿಕೆಯಿಂದ ದೂರ ಉಳಿಯಲು ಬಿಜೆಪಿ ಕಾರ್ಯಕರ್ತರ ನಿರ್ಧಾರ:
ಸುಳ್ಯ: ಕಳೆದ 28 ವರ್ಷಗಳಿಂದ ಅರಂತೋಡು – ಅಡ್ತಲೆ ರಸ್ತೆ ಅಭಿವೃದ್ಧಿಗಾಗಿ ಬೇಡಿಕೆ ನೀಡಿದ್ದರೂ ಇಲ್ಲಿಯವರೆಗೆ ಯಾವುದೇ ಪ್ರಯೋಜನ ಕಾಣಲಿಲ್ಲ.
ಆದ್ದರಿಂದ ರಸ್ತೆ ಅಭಿವೃದ್ಧಿ ಆಗುವ ತನಕ ಪಕ್ಷದ ಎಲ್ಲಾ ಕಾರ್ಯ ಚಟುವಟಿಕೆಯಿಂದ ದೂರ ಇರುವುದಾಗಿ, ಮತ್ತು ಚುನಾವಣೆ ಸಂಧರ್ಭದಲ್ಲಿ ಯಾವುದೇ ಪಕ್ಷಕ್ಕೆ ಚುನಾವಣೆ ಪ್ರಚಾರಕ್ಕೂ ಬಿಡುವುದಿಲ್ಲ ಎಂದು ಸುಳ್ಯ ತಾಲೂಕಿನ ಅಡ್ತಲೆ 3 ನೇ ವಾರ್ಡ್ ಬಿಜೆಪಿ ಅಧ್ಯಕ್ಷರು ಹೇಳಿಕೆ ನೀಡಿದ್ದಾರೆ.
ಈ ನಿರ್ಧಾರ ಕಾರ್ಯಕರ್ತರೊಂದಿಗೆ ಮಾತನಾಡಿ ನಿರ್ಧರಿಸಿದ್ದು ಮಂಡಲಾಧ್ಯಕ್ಷರಿಗೆ ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ ಎನ್ನಲಾಗಿದೆ.
ಅವರು ನೀಡಿರುವ ಹೇಳಿಕೆಯಲ್ಲಿ ‘ಅರಂತೋಡು ಎಲಿಮಲೆ ರಸ್ತೆ ಅಭಿವೃದ್ಧಿ ಕುರಿತಂತೆ ಕಳೆದ 28 ವರ್ಷಗಳಿಂದ, ಹಲವಾರು ಸಲ ನಮ್ಮ ಪಕ್ಷದ ಎಲ್ಲಾ ಮುಖಂಡರುಗಳಿಗೆ ಹಾಗೂ ಸಚಿವರುಗಳಿಗೆ ಮನವಿ ಮಾಡುತ್ತ ಬರುತ್ತಿರುವುದು, ತಮಗೆ ತಿಳಿದ ವಿಚಾರ ಪ್ರತಿ ವರ್ಷ ಪಕ್ಷದ ಸಭೆಗಳಲ್ಲಿ ನಮ್ಮ ಬೇಡಿಕೆಯನ್ನು ಮಂಡಿಸಿದಾಗ, ಭರವಸೆ ಮಾತ್ರ ಕೊಟ್ಟು ಇದುವರೆಗೂ ಬೇಡಿಕೆ ಭರವಸೆ ಆಗಿಯೇ ಉಳಿದುಕೊಂಡಿರುವುದು ತಮಗೆ ತಿಳಿದಿದೆ.
ಪ್ರತಿ ಚುನಾವಣಾ ಸಂದರ್ಭ, ತಾವು ಕೊಟ್ಟ ಮಾತಿನ ಮೇಲೆ ನಂಬಿಕೆಯಲ್ಲಿ, ತಮ್ಮ ಮೇಲೆ ವಿಶ್ವಾಸ ಇರಿಸಿ, ಚುನಾವಣಾ – ಪ್ರಚಾರ ಸಂದರ್ಭ ನಾವುಗಳು, ಜನತೆಯಲ್ಲಿ ಕಳೆದ 20 ವರ್ಷಗಳು ಸುಳ್ಳು ಹೇಳುತ್ತಾ ಬರುತ್ತಿದ್ದು, ಅತ್ಮ ವಂಚನೆ ಆಗಿರುತ್ತದೆ.
ಆದುದರಿಂದ ಕನಿಷ್ಠ ಅರಂತೋಡಿನಿಂದ- ಅಡ್ತಲೆ ತನಕ ಸದ್ರಿ ರಸ್ತೆ ಅಭಿವೃದ್ಧಿ ಅಗದೆ ಮುಂದಿನ ಯಾವುದೇ ಚುನಾವಣೆಯಲ್ಲಿ ಹಾಗೂ ಪಕ್ಷದ ಎಲ್ಲಾ ಕಾರ್ಯ ಚಟುವಟಿಕೆಯಲ್ಲಿ ಭಾಗವಹಿಸದೆ ಅಸಹಕಾರ ಮಾಡುವುದಾಗಿ ನಿರ್ಧಾರ ಮಾಡಿರುತ್ತೇವೆ, ಅಲ್ಲದೆ ಬೇಡಿಕೆ ಈಡೇರುವ ತನಕ ಮುಂದಿನ ಯಾವುದೇ ಚುನಾವಣೆ ಪ್ರಚಾರಕ್ಕೆ ನಮ್ಮ ವಾರ್ಡ್ ನಲ್ಲಿ ಯಾವುದೇ ಪಕ್ಷಕ್ಕೆ ಅವಕಾಶ ನೀಡುವುದಿಲ್ಲ ಎಂದೂ, ನಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಚುನಾವಣೆ ಪ್ರಚಾರಕ್ಕೆ ಪ್ರಾರಂಭ ಮಾಡಿದಲ್ಲಿ ಮುಂದೆ ಆಗುವಂತಹ ಯಾವುದೇ ಅಹಿತಕರ ಘಟನೆಗಳಿಗೆ ಬೂತ್ ಸಮಿತಿಯ ಜವಾಬ್ದಾರಿ ಆಗಿರುವುದಿಲ್ಲ ಎಂದು ಉತ್ತರ ಬೂತ್ ಸಮಿತಿಯ ಎಲ್ಲಾ ಪದಾಧಿಕಾರಿಗಳ ಪರವಾಗಿ ಬೂತ್ ಅಧ್ಯಕ್ಷ ಲೋಹಿತ್ ತಿಳಿಸಿದ್ದಾರೆ.