ಮಂಗಳೂರು ವಿ.ವಿ ಪದವಿ ಪರೀಕ್ಷಾ ಫಲಿತಾಂಶ ವಿಳಂಬ: ಸಿಂಡಿಕೇಟ್ ಸಭೆಗೆ ನುಗ್ಗಿದ ABVP ಕಾರ್ಯಕರ್ತರು
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಫಲಿತಾಂಶ ವಿಳಂಬ ಪ್ರಶ್ನಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಇಂದು ಏಕಾಏಕಿ ಪ್ರತಿಭಟನೆ ನಡೆಸಿದರು.
ವಿವಿ ಸಿಂಡಿಕೇಟ್ ಸಭೆಗೆ ಎಬಿವಿಪಿ ಕಾರ್ಯಕರ್ತರು ನುಗ್ಗಲು ಯತ್ನಿಸಿದ್ದಾರೆ. ಕೊಣಾಜೆಯ ಮಂಗಳೂರು ವಿ ವಿ ಯ ಆಡಳಿತ ಸೌಧಕ್ಕೆ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಸುಮಾರು 500ರಷ್ಟಿದ್ದ ಎಬಿವಿಪಿ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ ನಡೆಯಿತು.
ಮಂಗಳೂರು ವಿ.ವಿ ಆಡಳಿತ ಸೌಧದ ಆವರಣಕ್ಕೆ ಬಂದಾಗ ಪೊಲೀಸರ ಅವರಿಗೆ ತಡೆಯೊಡ್ಡಿದರು. ಈ ವೇಳೆ ಎಬಿವಿಪಿ ಕಾರ್ಯಕರ್ತರು ಬ್ಯಾರಿಕೇಡ್ ಗಳನ್ನು ತಳ್ಳಿ ನುಗ್ಗಲು ಯತ್ನಿಸಿದ್ದಾರೆ.
ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ನೂಕಾಟ-ತಳ್ಳಾಟ ನಡೆದಿದೆ. ಅಷ್ಟು ಹೊತ್ತಿಗೆ ವಿ.ವಿ ಪರೀಕ್ಷಾಂಗ ಕುಲಸಚಿವ ಪ್ರೊ.ಪಿ.ಎಲ್ ಧರ್ಮ ಮತ್ತು ಕುಲಪತಿ ಪಿ.ಎಸ್ ಯಡಪಡಿತ್ತಾಯ ಆಗಮಿಸಿ ಚರ್ಚಿಸಿದರು.
ವಿ.ವಿ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡದೆ ಸತಾಯಿಸುತ್ತಿರುವ ವಿವಿ ಕ್ರಮಕ್ಕೆ ಕಾರ್ಯಕರ್ತರು ಖಂಡಿಸಿದರು. ಅಂಕಪಟ್ಟಿ ಬಾರದೇ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಲಾಗದೇ ಸಮಸ್ಯೆ ಎದುರಿಸುವಂತಾಗಿದೆ ಎಂದು ವಿದ್ಯಾರ್ಥಿ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.