ಮಂಗಳೂರು: ವಿಮಾನದಲ್ಲಿ ಪ್ರಯಾಣಿಕನ ಪ್ರಾಣ ಉಳಿಸಿದ ಯುವ ವೈದ್ಯೆ ತಾಜಿಶ್ ಫಾತಿಮಾ
ಮಂಗಳೂರು: ವಿಮಾನದಲ್ಲಿ ಅಸ್ವಸ್ಥಗೊಂಡ ಪ್ರಯಾಣಿಕರೊಬ್ಬರಿಗೆ ಮಂಗಳೂರಿನ ವೈದ್ಯೆ ಡಾ. ತಾಜೀಶ್ ಫಾತಿಮಾ ಸಕಾಲದಲ್ಲಿ ಚಿಕಿತ್ಸೆ ನೀಡಿದ ಘಟನೆ ನಡೆದಿದ್ದು ಇದು ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ದುಬೈಯಿಂದ ಮಂಗಳೂರಿಗೆ ಬರುತ್ತಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ಅಸ್ವಸ್ಥಗೊಂಡ ಪ್ರಯಾಣಿಕರೊಬ್ಬರಿಗೆ ಮಂಗಳೂರಿನ ವೈದ್ಯೆ ಡಾ. ತಾಜೀಶ್ ಫಾತಿಮಾ ಸಕಾಲದಲ್ಲಿ ಚಿಕಿತ್ಸೆ ನೀಡಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ವೈದ್ಯೆಯ ಈ ಸೇವೆ, ಸಮಯ ಪ್ರಜ್ಞೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಮಂಗಳವಾರ ಸಂಜೆ 4:20ಕ್ಕೆ ದುಬೈಯಿಂದ ಹೊರಡಬೇಕಿದ್ದ ಸ್ಪೈಸ್ ಜೆಟ್ ವಿಮಾನವು ಕಾರಣಾಂತರದಿಂದ ರಾತ್ರಿ 7:20ಕ್ಕೆ ಹೊರಟಿತ್ತು. ಸುಮಾರು 8:30ರ ವೇಳೆಗೆ ಪ್ರಯಾಣಿಕರೊಬ್ಬರು ತೀವ್ರ ಅಸ್ವಸ್ಥಗೊಂಡಿದ್ದು, ವೈದ್ಯರಿದ್ದರೆ ಪರೀಕ್ಷಿಸುವಂತೆ ಪೈಲಟ್ ಸೂಚನೆ ಹೊರಡಿಸಿದರು. ಅದೇ ವಿಮಾನದಲ್ಲಿ ಮಂಗಳೂರಿನ ಕುಲಶೇಖರದ ವೈದ್ಯೆ ಡಾ. ತಾಜೀಶ್ ಕೂಡ ಪ್ರಯಾಣಿಸುತ್ತಿದ್ದರು. ತಕ್ಷಣ ಡಾ. ತಾಜೀಶ್ ಅಸ್ವಸ್ಥಗೊಂಡಿದ್ದ ಪ್ರಯಾಣಿಕನ ನೆರವಿಗೆ ಧಾವಿಸಿದರಲ್ಲದೆ ಸಹ ಪ್ರಯಾಣಿಕರ ಸಹಾಯದಿಂದ ಚಿಕಿತ್ಸೆ ನೀಡಿದರು. ಕೆಲವೇ ನಿಮಿಷದಲ್ಲಿ ಪ್ರಯಾಣಿಕ ಚೇತರಿಸಿಕೊಂಡರು ಎನ್ನಲಾಗಿದೆ.
ವೈದ್ಯೆ ಡಾ. ತಾಜೀಶ್ ಫಾತಿಮಾ ಅವರ ಈ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳು ಹರಿದಾಡುತ್ತಿವೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಾ. ತಾಜೀಶ್ ‘ನಿನ್ನೆ ರಾತ್ರಿ ನಾನು ಸ್ಪೈಸ್ ಜೆಟ್ ವಿಮಾನದಲ್ಲಿ ದುಬೈಯಿಂದ ಮಂಗಳೂರಿಗೆ ಬರುವಾಗ ಪ್ರಯಾಣಿಕರೊಬ್ಬರು ಅಸ್ವಸ್ಥಗೊಂಡ ಬಗ್ಗೆ ಪೈಲಟ್‌ನಿಂದ ಮಾಹಿತಿ ಸಿಕ್ಕಿತು. ತಕ್ಷಣ ನಾನು ಧಾವಿಸಿ ಚಿಕಿತ್ಸೆ ನೀಡಿದೆ. ಚೇತರಿಸಿಕೊಂಡ ಬಳಿಕ ಅವರ ಕಣ್ತುಂಬಿ ಬಂತು. ಕೃತಜ್ಞತಾ ಭಾವ ಎದ್ದು ಕಾಣುತ್ತಿತ್ತು. ಸಮಾಜ ಸೇವೆಯಲ್ಲಿ ಈ ಹಿಂದೆಯೇ ತೊಡಗಿಸಿಕೊಂಡಿದ್ದ ನನಗೆ ಪ್ರಯಾಣಿಕನೊಬ್ಬನ ಪ್ರಾಣ ಉಳಿಸಿದ ಖುಷಿಯೊಂದಿಗೆ ನನ್ನ ಕರ್ತವ್ಯ ನಿಭಾಯಿಸಿದ ತೃಪ್ತಿ ಇದೆ ಎಂದು ಹೇಳಿದ್ದಾರೆ.