ಮಂಗಳೂರು ಆಟೋರಿಕ್ಷಾ ಸ್ಪೋಟ ಪ್ರಕರಣ: ತೀವ್ರಗೊಂಡ ತನಿಖೆ
ಮಂಗಳೂರು: ಮಂಗಳೂರಿನ ಗರೋಡಿಯಲ್ಲಿ ನಿನ್ನೆ ಸಂಜೆ ಸಂಭವಿಸಿದ ಆಟೋ ಬಾಂಬ್ ಬ್ಲಾಸ್ಟ್ ಸಂಬಂಧಿಸಿದಂತೆ ತನಿಖೆ ತೀವ್ರಗೊಂಡಿದೆ, ಸ್ಪೋಟಗೊಂಡಿರುವುದು ‘ಕುಕ್ಕರ್ ಬಾಂಬ್ ‘ ಎಂದು ಪ್ರಾರ್ಥಮಿಕ ತನಿಖೆಯಿಂದ ಸ್ಪಷ್ಟವಾಗಿದೆ.
ಬಾಂಬ್ ಸ್ಕ್ವಾಡ್, ಶ್ವಾನದಳ ಆಗಮಿಸಿ ತನಿಖೆ ನಡೆಸಿದ್ದು, ಎನ್‌ಐಎ, ಕೇಂದ್ರ ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಗಳು ಆಗಮಿಸಿ ವಿವಿಧ ಆಯಾಮಗಳಲ್ಲಿ ತನಿಖೆ ಕೈಗೆತ್ತಿಕೊಂಡಿದ್ದಾರೆ.
ಇದೊಂದು ವಿದ್ವಾಂಸಕ ಕೃತ್ಯ ಎಂದು ಈಗಾಗಲೇ ಸಾಬೀತಾಗಿದ್ದು ನಗರದೆಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ.
ಈ ಪ್ರಕರಣ ಭೇದಿಸಲು ಉನ್ನತ ಅಧಿಕಾರಿಗಳನ್ನೊಳಗೊಂಡ ಮೂರು ತಂಡಗಳ ರಚನೆ ಮಾಡಲಾಗಿದೆ.
ಆಟೋದಲ್ಲಿ ಸ್ಪೋಟಗೊಂಡಿದ್ದು ಕುಕ್ಕರ್ ಬಾಂಬ್ ಎಂಬುವುದು ಸ್ಪಷ್ಟವಾಗಿದ್ದು ಉತ್ತರ ಪ್ರದೇಶ ಮೂಲದ ಕಾರ್ಮಿಕ ಎನ್ನಲಾದ ವ್ಯಕ್ತಿ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿತ್ತು.
ಆಟೋದಲ್ಲಿದ್ದ ಪ್ರಯಾಣಿಕ ಹಿಂದಿ ಭಾಷೆ ಮಾತನಾಡುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಪ್ರೇಮ್ ರಾಜ್ ಕನೋಗಿ ಎಂಬ ಹೆಸರಿನ ಐಡಿ ದಾಖಲೆ ಪತ್ತೆಯಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಲ್ಪಸ್ವಲ್ಪ ಗಾಯಗಳಾಗಿದ್ದ ಆಟೋ ಚಾಲಕನೂ ಪೊಲೀಸರಲ್ಲಿ ಗೊಂದಲದ ಹೇಳಿಕೆ ನೀಡಿದ್ದು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.
ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ಆ ವ್ಯಕ್ತಿಯನ್ನು ಹತ್ತಿಸಿಕೊಂಡು ಬಂದಿದ್ದಾಗಿ ಆಟೋ ಚಾಲಕ ಹೇಳಿಕೆ ನೀಡಿದ್ದಾನೆ, ಆದ್ದರಿಂದ ಈ ಸ್ಪೋಟಕ ರೈಲಿನಲ್ಲಿ ತಂದಿರಬಹುದಾದ ಶಂಕೆ ವ್ಯಕ್ತವಾಗಿದೆ.
ಸ್ಫೋಟದ ತೀವ್ರತೆಗೆ ಪ್ರಯಾಣಿಕನ ದೇಹದ ಅರ್ಧ ಭಾಗ ಸುಟ್ಟು ಹೋಗಿದೆ. ಆತ ಸದ್ಯ ಗಂಭೀರ ಸ್ಥಿತಿಯಲ್ಲಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಸ್ಫೋಟದ ತೀವ್ರತೆಗೆ ಗರೋಡಿ ಪ್ರದೇಶದಲ್ಲಿ ದಟ್ಟ ಹೊಗೆ ಹಬ್ಬಿದ್ದು ಈ ಸಂದರ್ಭ ಆತಂಕ ಸೃಷ್ಟಿಯಾಗಿತ್ತು.
ಆಟೋದಲ್ಲಿ ಬ್ಲಾಸ್ಟ್ ಆದ ಕುಕ್ಕರ್, ಅದರಲ್ಲಿ ಕೆಲವು ಜೋಡಿಸಿದ ತಂತಿಗಳು, ಒಂದು 9 ವೋಲ್ಟ್ ಬ್ಯಾಟರಿ ಮತ್ತಿತರ ಪದಾರ್ಥಗಳನ್ನು ಪ್ರತ್ಯಕ್ಷದರ್ಶಿಗಳು ಗಮನಿಸಿದ್ದಾರೆ. ಎಂದು ಘಟನೆಯ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.